ಉಡುಪಿ : ಬ್ರಹ್ಮಾವರ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ಮೂವರು ಬಾಲಕಿಯರು ಇಂದು ಸಂಜೆ ನಾಪತ್ತೆಯಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಾಹಿತಿಯ ಪ್ರಕಾರ, ಉತ್ತರ ಕರ್ನಾಟಕದ ಮೂಲದ 6, 7 ಮತ್ತು 8ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರು, ಇಂದು ಸಂಜೆ ಸುಮಾರು ನಾಲ್ಕು ಗಂಟೆಯ ಸಮಯದಲ್ಲಿ ಹಾಸ್ಟೆಲ್ನಿಂದ ಹೊರಟ ಬಳಿಕ ಮರಳಿ ಹಾಸ್ಟೆಲ್ಗೆ ಹಿಂತಿರುಗಿಲ್ಲ ಎಂದು ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ಪೊಲೀಸರ ಪ್ರಾಥಮಿಕ ಅಂದಾಜಿನ ಪ್ರಕಾರ, ಆ ಬಾಲಕಿಯರು ಬೆಂಗಳೂರು ದಿಕ್ಕಿಗೆ ತೆರಳಿರುವ ಸಾಧ್ಯತೆ ವ್ಯಕ್ತವಾಗಿದೆ. ಘಟನೆಯ ಕುರಿತು ಹಾಸ್ಟೆಲ್ ನಿರ್ವಾಹಕರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಬಾಲಕಿಯರ ಪತ್ತೆಗೆ ತುರ್ತು ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ವಿನಂತಿ ಮಾಡಿ, ಈ ಬಾಲಕಿಯರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ತಕ್ಷಣ ಸಂಪರ್ಕಿಸಲು ಮನವಿ ಮಾಡಿದ್ದಾರೆ.



