ಉಡುಪಿ : ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶಕ್ಕೆ ಆರಂಭಗೊಂಡ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಬಹುತೇಕ ಮುಗಿದರು ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಮುಖ್ಯವಾಗಿ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ತಾಲೂಕು ಕೇಂದ್ರ ಬ್ರಹ್ಮಾವರದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿಯ ಅವಾಂತರ ಒಂದೆರೆಡಲ್ಲ. ಇಲ್ಲಿ ನಿತ್ಯವು ಪ್ರಯಾಣಿಕರು ವಾಹನ ಸವಾರರಲ್ಲೂ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ. ಇದಷ್ಟು ಮುಖ್ಯವಾದ ಕಾರಣ ಚತುಷ್ಫಥ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಪೇಟೆಯಲ್ಲಿ ಇಬ್ಭಾಗವಾಗುವಂತೆ ನಿರ್ಮಾಣಗೊಂಡ ಅಂಡರಪಾಸ್ (ಕ್ಯಾಟಲ್ ಪಾಸ್).

ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿಗೂ ಮೊದಲು ಬ್ರಹ್ಮಾವರ ಪೇಟೆಯ ಮಧ್ಯಭಾಗದಲ್ಲಿ ಇರುವ ಸರ್ವಿಸ್ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ ಗಳು ಬರಲು ಮತ್ತು ಅಲ್ಲಿಂದ ತೆರಳಲು ಸೂಕ್ತವಾದ ರೀತಿಯಲ್ಲಿ ಸಂಚಾರ ವ್ಯವಸ್ಥೆ ಇತ್ತು. ಬ್ರಹ್ಮಾವರ ಸರ್ವಿಸ್ ಬಸ್ ನಿಲ್ದಾಣದಲ್ಲಿ ಕುಂದಾಪುರದಿಂದ ಬರುವ ಬಸ್‌ಗಳು, ಬಾರ್ಕೂರು ಭಾಗ ಬಸ್ , ಹೆಬ್ರಿ ಭಾಗದಿಂದ ಬರುವ ಬಸ್ ಮತ್ತು ಉಡುಪಿಯಿಂದ ಬರುವ ಬಸ್ ಗಳು ಒಟ್ಟು ನಾಲ್ಕು ಕಡೆಯ ಬಸ್ ಗಳು ಬಂದು ಹೋಗುವ ವ್ಯವಸ್ಥೆ ಇದೆ. ಹೀಗಾಗಿ ಮೊದಲು ಒಂದೆ ರಸ್ತೆ ಇದ್ದಾಗ ಯಾವುದೇ ಸಮಸ್ಯೆ ಇಲ್ಲದೆ ಇಲ್ಲಿ ಬಸ್ ಸಂಚಾರಕ್ಕೂ, ಖಾಸಗಿ ವಾಹನಗಳ ಸಂಚಾರಕ್ಕೂ ಸೂಕ್ತ ವ್ಯವಸ್ಥೆ ಇತ್ತು. ಯಾವಾಗ ಹೆದ್ದಾರಿ ಚತುಷ್ಪಥ ಕಾಮಗಾರಿ ಪ್ರಾರಂಭವಾಗಿಯೋ ಆ ದಿನದಿಂದ ಇಂದಿನವರೆಗೂ ಬ್ರಹ್ಮಾವರ ಪೇಟೆಯಲ್ಲಿ ವಾಹನ ಚಾಲಕರಿಂದ ಹಿಡಿದು ಪಾದಾಚಾರಿಗಳು ಎಲ್ಲಿಂದ ಹೇಗೆ ಹೋಗಬೇಕು ಎನ್ನುವ ಗೊಂದಲವಿದೆ. ಇದೇ ಗೊಂದಲದಿಂದಾಗಿ ವಾರಕ್ಕೆ ಒಮ್ಮೆಯಾದರೂ ಇಲ್ಲಿ ಅಪಘಾತಗಳು ನಡೆಯುತ್ತಲೇ ಇವೆ.
ಇನ್ನು ಬ್ರಹ್ಮಾವರ ಪೇಟೆಯ ಮಧ್ಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋದ ಹಿನ್ನಲೆಯಲ್ಲಿ ಹಿಂದೆ ಮುಂದೆ ಯೋಚಿಸದೆ, ಪೇಟೆಯ ಹೊರಭಾಗದಲ್ಲಿ ಇರಬೇಕಾದ ಅಂಡರ್ ಪಾಸ್ (ಕ್ಯಾಟಲ್ ಪಾಸ್) ಅನ್ನು ತಂದು ಪೇಟೆಯ ಮಧ್ಯೆ ನಿರ್ಮಿಸಿ ಪೇಟೆ ಇಬ್ಭಾಗವಾಗುವಂತೆ ಮಾಡಲಾಯಿತು. ಹೀಗೆ ನೋಡಿದರೆ ಅಂಡರ್ ಪಾಸ್ ಅಲ್ಲದ ಕ್ಯಾಟಲ್ ಪಾಸ್ ಅಲ್ಲದ ಈ ಕಾಮಗಾರಿ ಬ್ರಹ್ಮಾವರದ ವಾಹನ ಸವಾರರಿಗೆ ನರಕ ಸದೃಶ್ಯವಾಗಿಸಿದೆ. ಯಾಕೆಂದರೆ ಈ ಅಂಡರಪಾಸ್ ಅಡಿ ಭಾಗದಲ್ಲ ಕೇವಲ ಲಘು ವಾಹನಗಳು ಮಾತ್ರ ಸಂಚರಿಸುವಷ್ಟು ಎತ್ತರವಿರುದೆ ದೊಡ್ಡ ತಲೆ ನೋವಿಗೆ ಕಾರಣವಾಗಿದೆ. ಇನ್ನು ಬ್ರಹ್ಮಾವರ ಪೇಟೆಯಿಂದ ಪ್ರಾರಂಭವಾಗುವ ಈ ಅಂಡರ್ ಪಾಸ್ ಆಕಾಶವಾಣಿ ವೃತ್ತದ ಬಳಿ ಮುಗಿಯುತ್ತದೆ, ಇಲ್ಲಿ ಬಾರ್ಕೂರು ಭಾಗದಿಂದ, ಕುಂದಾಪುರ ಭಾಗದಿಂದ, ಬ್ರಹ್ಮಾವರ ಸಂತೆ ಮಾರುಕಟ್ಟೆ ಬಳಿಯಿಂದ ಮತ್ತು ಉಡುಪಿ ಭಾಗದಿಂದ ಬರುವ ವಾಹನಗಳು ಸೇರುವ ಸ್ಥಳವಾಗಿದೆ. ಇಲ್ಲಿಗೇ ಅಂಡರ್ ಪಾಸ್ ಮುಗಿದಿದ್ದು, ವಾಹನ ಸವಾರರು ಬಾರ್ಕೂರು ಭಾಗಕ್ಕೆ ತೆರಳುವಾಗ ಎಚ್ಚರಿಕೆ ತೆರಳಬೇಕಾದ ಪರಿಸ್ಥಿತಿ ಇದೆ, ಅಲ್ಲದೇ ಇದು ಮತ್ತೆ ಮತ್ತೆ ಅಪಘಾತಗಳಿಗೆ ಕಾರಣವಾಗುತ್ತಿದೆ.
ಬ್ರಹ್ಮಾವರ ಭಾಗದಲ್ಲಿ ಅತಿ ಹೆಚ್ಚು ಅಪಘಾತ ನಡೆಯುವ ಇನ್ನೊಂದು ಸ್ಥಳ ಎಂದರೆ ಅದು ಮಹೇಶ್ ಆಸ್ಪತ್ರೆ ಮುಂಭಾಗದ ಯು ಟರ್ನ್ ಬಳಿ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸರಿಯಾದ ಸರ್ವಿಸ್ ರಸ್ತೆ ಇಲ್ಲ ಕಾರಣ ವಾಹನಗಳು ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನ ಚಲಾಯಿಸಿಕೊಂಡ ಬರುವ ಘಟನೆಗಳು ನಡೆಯುತ್ತಿದೆ. ಇದರಿಂದ ಇದುವರೆಗೆ ನೂರಾರು ಅಪಘಾತಗಳು ಆಸ್ಪತ್ರೆಯ ಮುಂಭಾಗದಲ್ಲಿಯೇ ನಡೆಯುತ್ತಿದೆ. ಇದರ ಜೊತೆ ಸಾಕಷ್ಟು ಜನ ರಸ್ತೆ ದಾಟವ ಜಾಗವು ಕೂಡ ಇದೆ ಆಗಿದ್ದು, ಇಲ್ಲಿ ಪಾದಾಚಾರಿಗಳು ಕೂಡ ಸೇಫ್ ಅಲ್ಲ ಎನ್ನುವ ವ್ಯವಸ್ಥೆ ಇದೆ.
ಸದ್ಯ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು ಎಂದು ಬ್ರಹ್ಮಾವರದ ನಾಗರೀಕರು ಹೋರಾಟಕ್ಕೆ ಇಳಿದಿದ್ದಾರೆ. ಸರಿಯಾದ ಸರ್ವಿಸ್ ರಸ್ತೆ ಬೇಕು, ಟ್ರಾಫಿಕ್ ಸಮಸ್ಯೆಗಳು ಅಪಘಾತ ತಪ್ಪಿಸಲು ಫ್ಲೈ ಓವರ್ ನಿರ್ಮಾಣವಾಗಬೇಕು ಎಂದು ಹೋರಾಟಗಾರರು ಪ್ರತಿಭಟನೆ ಮೂಲಕ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಜಿಲ್ಲಾಢಳಿತ ಮತ್ತು ಹೆದ್ದಾರಿ ಪ್ರಾಧಿಕಾರಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಯಿಂದ ಎಸ್ ಎಂಎಸ್ ಕಾಲೇಜು ವರೆಗೆ ರಾಷ್ಟ್ರೀಯ ಹೆದ್ದಾರಿ ಎರಡು ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವ ಭರವಸೆ ನೀಡಿದೆ. ಸದ್ಯ ಈ ಹಿನ್ನಲೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ತೆರವು ಕಾರ್ಯ ಆರಂಭವಾಗಿದೆ. ಅದರೆ ಬ್ರಹ್ಮಾವರ ಉಳಿದ ಸಮಸ್ಯೆಗಳಿಗೆ ಯಾವಾಗ ಉತ್ತರ ಸಿಗಲಿದೆ ಎನ್ನುವುದನ್ನು ದಿನ ಕಾದು ನೋಡಬೇಕಾಗಿದೆ.
ಬ್ರಹ್ಮಾವರದಲ್ಲಿ ಫ್ಲೈಓವರ್ ನಿರ್ಮಾಣ ಅನಿವಾರ್ಯವಾಗಿದೆ. ಈ ಬಗ್ಗೆ ಪರಿಶೀಲಿಸಿ ಅಂದಾಜು ಪಟ್ಟಿಯನ್ನು ತಯಾರಿಸಲು ಎನ್‌ಎಚ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಈ ವರದಿಯನ್ನು ಮುಂದಿನ ಕ್ರಮಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು. ಜಿಲ್ಲೆಯ ರಾ.ಹೆದ್ದಾರಿಯಲ್ಲಿ ಜನರ ಅಜಾಗರೂಕತೆ ಅಥವಾ ವಾಹನ ಚಾಲಕರ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಯಿಂದ ರಸ್ತೆ ಅಪಘಾತಗಳು ಉಂಟಾಗುತ್ತಿವೆ. ಹೆಚ್ಚು ಜನನಿಬಿಡ ವ್ಯಾಪ್ತಿಯಲ್ಲಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ಗಳ ಅವಶ್ಯಕತೆ ಇದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು ಪರಿಶೀಲಿಸಿ, ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬ್ರಹ್ಮಾವರ ಹಾಗೂ ತೆಕ್ಕಟ್ಟೆಯಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಲು ಯೋಜನೆ ರೂಪಿಸಿ, ಕೇಂದ್ರ ಸರಕಾರದ ಅನುಮತಿಗೆ ಸಲ್ಲಿಸಲಾಗುವುದು
ಡಾ.ವಿದ್ಯಾಕುಮಾರಿ ಕೆ (ಜಿಲ್ಲಾಧಿಕಾರಿಗಳು)