ಬೆಂಗಳೂರು : ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ಭಾಗದ ರೈತರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಒದಗಿಸಲು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ರಾಜ್ಯ ಸಚಿವರ ಬೇಟಿ ನಡೆಸಿ ಸಮಸ್ಯೆಗಳ ಬಗ್ಗೆ ವಿವರವಾಗಿ ಮನವರಿಕೆ ಮಾಡಿದರು. ಶಾಸಕರು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಪೌರಾಡಳಿತ ಸಚಿವ ರಹೀಮ್ ಖಾನ್ ಹಾಗೂ ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ದೀಪ ಎಂ. ಚೋಳನ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮರುವಿಂಗಡಣೆ ಅಗತ್ಯವಿದೆ ಎಂದು ಹೇಳಿದರು.

ಗ್ರಾಮೀಣ ಜನತೆಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಪ್ರಸ್ತುತ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನು ಹೊರಗಿಡಿ, ಹೊಸದಾಗಿ ವ್ಯಾಪ್ತಿಯನ್ನು ಮರುವಿಂಗಡಿಸಲು ಮನವಿ ಸಲ್ಲಿಸಿದರು. ಬಫರ್ ಜೋನ್ ಮಿತಿಯನ್ನು ಕೈಬಿಟ್ಟು, ಆ ಪ್ರದೇಶದಲ್ಲಿ ಗ್ರಾಮ ಪಂಚಾಯತ್ ನಿಯಮಗಳನ್ನು ಅನ್ವಯಿಸುವಂತೆ ಅವರು ವಿನಂತಿಸಿದರು.

ಈ ಕ್ರಮದ ಮೂಲಕ ರೈತರಿಗೆ ಅಕ್ರಮ ಸಕ್ರಮ, 94(ಸಿ), ಕುಮ್ಕಿ ಹಕ್ಕುಗಳು ಹಾಗೂ ವಸತಿ ಯೋಜನೆಗಳ ಪ್ರಯೋಜನ ಲಭ್ಯವಾಗಲಿದ್ದು, ಗ್ರಾಮೀಣ ಬಡಜನರ ಹಿತ ಕಾಪಾಡಲು ಸಹಾಯಕವಾಗಲಿದೆ ಎಂದು ಶಾಸಕರು ತಮ್ಮ ಮನವಿಯಲ್ಲಿ ತಿಳಿಸಿದರು. ಶಾಸಕರು ಸಚಿವರೊಂದಿಗೆ ನಡೆದ ಚರ್ಚೆಯಲ್ಲಿ ಪಟ್ಟಣ ಪಂಚಾಯತ್ನಿಂದ ಉಂಟಾಗುತ್ತಿರುವ ಜ್ವಲಂತ ಸಮಸ್ಯೆಗಳು, ಮೂಲ ಸೌಕರ್ಯಗಳ ಕೊರತೆ, ಹಾಗೂ ಜನಜೀವನದ ಮೇಲೆ ಬೀರುತ್ತಿರುವ ಪ್ರಭಾವ ಕುರಿತು ವಿಸ್ತೃತವಾಗಿ ವಿವರಿಸಿದರು.

ಸಚಿವರು ಮತ್ತು ಕಾರ್ಯದರ್ಶಿಗಳು ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ವಿಷಯವನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


