ಉಡುಪಿ : ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ವಿತರಿಸಲು ಉದ್ದೇಶಿಸಿದ್ದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಅಧಿಕಾರಿಗಳು 400 ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಹರಕೇರಿಯಲ್ಲಿ ನಡೆದಿದೆ. ಬಿಜೂರು ಪ್ರದೇಶದಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಅಬ್ದುಲ್ ಮಜೀದ್ ಮತ್ತು ಆಯಿಷಾ ವಾಸಿಂ ತ್ರಿಚಕ್ರ ಸರಕು ವಾಹನದಲ್ಲಿ ಅಕ್ಕಿಯನ್ನು ಸಂಗ್ರಹಿಸುತ್ತಿರುವುದು ಪತ್ತೆಯಾಗಿದೆ. ಸರ್ಕಾರ ಉಚಿತವಾಗಿ ವಿತರಿಸಲು ನೀಡುವ ಅಕ್ಕಿಯನ್ನು ಅಪರಿಚಿತ ಮೂಲಗಳಿಂದ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದರು ಎನ್ನಲಾಗಿದೆ.

(AI Generated Picture)
ಕಾರ್ಯಾಚರಣೆಯಲ್ಲಿ ಸುಮಾರು 9,200 ರೂಪಾಯಿ ಮೌಲ್ಯದ 400 ಕೆಜಿ ಅಕ್ಕಿ ಇರುವ 15 ಪಾಲಿಥಿನ್ ಚೀಲಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಅಕ್ಕಿಯನ್ನು ತಲ್ಲೂರು ಟಿಎಎಂಪಿಎಂಸಿ ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3, 6 ಮತ್ತು 7ರಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


