ಉಡುಪಿ: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಕಪ್ಪಡಿ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ವಿಜಯ ಶೆಟ್ಟಿ ಎಂಬಾತನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 11 ರಂದು ಬಂದ ಖಚಿತ ಮಾಹಿತಿಯ ಆಧಾರದ ಮೇಲೆ, ಉಪನಿರೀಕ್ಷಕ ತಿಮ್ಮೇಶ ಬಿ.ಎನ್. ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳದ ಮೇಲೆ ಧಾಳಿ ನಡೆಸಿ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ವಿಜಯ ಶೆಟ್ಟಿಯನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ನಡೆಸಿದ ಪರಿಶೀಲನೆಯ ವೇಳೆ, ಸರ್ವೆ ನಂ. 43ರ ಸರ್ಕಾರಿ ಜಾಗದಲ್ಲಿ ಸುಮಾರು 40 ಅಡಿ ಉದ್ದ, 40 ಅಡಿ ಅಗಲ ಮತ್ತು 8 ಅಡಿ ಆಳದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆದಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಸುಮಾರು 200 ಕೆಂಪುಕಲ್ಲುಗಳು, ಹಾಗೂ ಕೆಂಪುಕಲ್ಲು ಕತ್ತರಿಸಲು ಬಳಸಿದ್ದ ಟ್ರಾಲಿ ಮಷಿನ್ ಮತ್ತು ಜಿಎಸ್ 1100 ಮಾದರಿಯ ಸಣ್ಣ ಕಲ್ಲು ಕಟ್ಟಿಂಗ್ ಟಿಲ್ಲರ್ ಪತ್ತೆಯಾಗಿದ್ದು, ಒಟ್ಟು 1,30,500 ರೂಪಾಯಿ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ. ವಿಜಯ ಶೆಟ್ಟಿ ಅವರು ಯಾವುದೇ ಪರವಾನಿಗೆ ಇಲ್ಲದೆ ಸರ್ಕಾರಿ ಭೂಮಿಯಿಂದ ಕೆಂಪುಕಲ್ಲುಗಳನ್ನು ತೆಗೆದು ಅಕ್ರಮ ಸಂಪಾದನೆ ಮಾಡುವ ಉದ್ದೇಶದಿಂದ ಗಣಿಗಾರಿಕೆ ನಡೆಸುತ್ತಿದ್ದರೆಂದು ತನಿಖೆಯಿಂದ ಸ್ಪಷ್ಟವಾಗಿದ್ದು, ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.



