ಉಡುಪಿ: ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿದ್ದ ಬಿಪಿಎಲ್ ಪಡಿತರ ಚೀಟಿ ರದ್ದತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ರಾಜ್ಯದ 7.59 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು ನಾಲ್ಕು ಲಕ್ಷ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಉಳಿದ ಸುಮಾರು 3.5 ಲಕ್ಷ ಕಾರ್ಡ್ಗಳ ರದ್ದತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಾರ್ಡ್ಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಸದ್ಯಕ್ಕೆ ಯಾವುದೇ ಬಿಪಿಎಲ್ ಕಾರ್ಡ್ ರದ್ದುಪಡಿಸದಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಪಡಿತರ ಚೀಟಿಗೆ ಕೆವೈಸಿ ಮಾಡಿಸಿ ಐದು ವರ್ಷ ಕಳೆದಿದ್ದು, ಮತ್ತೆ ಕೆವೈಸಿ ಮಾಡಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಸುಮಾರು 2.59 ಕೋಟಿ ಪಡಿತರ ಚೀಟಿಗಳಿಗೆ ಮತ್ತೆ ಕೆವೈಸಿ ಮಾಡಬೇಕಾಗಿದೆ ಎಂದು ರಿಜ್ವಾನ್ ಅರ್ಷದ್ ತಿಳಿಸಿದರು. ಕಾರ್ಡ್ದಾರರು ಮೃತಪಟ್ಟಿದ್ದರೆ, ಬಡತನ ರೇಖೆಗಿಂತ ಮೇಲಕ್ಕೆ ಬಂದಿದ್ದರೆ ಅಥವಾ ಇನ್ನು ಮುಂದೆ ಪಡಿತರ ಚೀಟಿಯ ಅಗತ್ಯವಿಲ್ಲದಿದ್ದರೆ ಅಂತಹ ವಿವರಗಳು ಕೆವೈಸಿ ಮೂಲಕ ಪತ್ತೆಯಾಗಲಿವೆ. ಸೆಪ್ಟೆಂಬರ್ 31ರೊಳಗೆ ಕೆವೈಸಿ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.ಹೊಸ ಬಿಪಿಎಲ್ ಕಾರ್ಡ್ ವಿತರಣೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ತಾನು ಇತ್ತೀಚೆಗಷ್ಟೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವುದಾಗಿ ಸಚಿವರು ತಿಳಿಸಿದರು.ಕರಾವಳಿ ಭಾಗದಲ್ಲಿ ಕುಚ್ಚಲಕ್ಕಿಗೆ ಇರುವ ಬೇಡಿಕೆಯ ಬಗ್ಗೆಯೂ ಗಮನ ಹರಿಸಲಾಗುವುದು. ಆಯಾ ಪ್ರದೇಶದ ಅಗತ್ಯಕ್ಕೆ ಅನುಗುಣವಾಗಿ ಆಹಾರ ವಿತರಣೆಯಲ್ಲಿ ಬದಲಾವಣೆ ಮಾಡಲಾಗಿದೆ. ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲೂ ಕುಚ್ಚಲಕ್ಕಿ ವಿತರಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಜಮೀರ್ ಧ್ವಜಾರೋಹಣ ಬೇಡ ಎಂದಿರುವುದಕ್ಕೆ ಬೇರೆ ಕಾರಣ
ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣದ ಜವಾಬ್ದಾರಿ ಬೇಡ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ ಎಂಬ ವಿಚಾರದಲ್ಲಿ ಬಿಜೆಪಿ ಮಾಡುತ್ತಿರುವ ಟೀಕೆಗೆ ಆಹಾರ ಸಚಿವ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದಾರೆ. ಬಿಜೆಪಿಗೆ ಈ ವಿಚಾರದಲ್ಲಿ ಟೀಕಿಸುವ ನೈತಿಕತೆ ಇಲ್ಲ. 52 ವರ್ಷಗಳ ಕಾಲ ನಾಗಪುರದಲ್ಲಿರುವ ಆರ್ಎಸ್ಎಸ್ ಮುಖ್ಯ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಹೀಗಿರುವಾಗ ನಮಗೆ ನೈತಿಕ ಬೋಧನೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.ಬ್ರಿಟಿಷರ ವಿರುದ್ಧ ಕಾಂಗ್ರೆಸ್ ರಾಷ್ಟ್ರಧ್ವಜ ಹಿಡಿದು ಹೋರಾಟ ನಡೆಸಿದೆ. ಅದೇ ಹೋರಾಟದ ರಕ್ತ ನಮ್ಮ ದೇಹದಲ್ಲೂ ಹರಿಯುತ್ತಿದೆ ಎಂದರು.ಜಮೀರ್ ಅಹ್ಮದ್ ಅವರು ಉಸ್ತುವಾರಿ ಜವಾಬ್ದಾರಿ ಬೇಡ ಎಂದು ಹೇಳಿದ್ದಾರೆ. ಅದೇ ಕಾರಣಕ್ಕೆ ಧ್ವಜಾರೋಹಣದ ಜವಾಬ್ದಾರಿಯನ್ನೂ ಬೇಡ ಎಂದಿದ್ದಾರೆ. ತಮ್ಮ ಮೇಲೆ ಬೇರೆ ಜವಾಬ್ದಾರಿಗಳು ಹೆಚ್ಚಾಗಿವೆ ಎಂದು ಅವರು ಹೇಳಿರುವುದಾಗಿ ರಿಜ್ವಾನ್ ಅರ್ಷದ್ ತಿಳಿಸಿದರು.ತಾನು ಪ್ರವಾಸದಲ್ಲಿದ್ದ ಕಾರಣ ಈ ಕುರಿತು ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದರು.

ಅನಧಿಕೃತ ಸಂಘಟನೆಗಳಿಗೆ ಶಾಲಾ ಆವರಣ ಬಳಕೆಗೆ ಅವಕಾಶವಿಲ್ಲ
ಶಾಲೆಗಳು, ಉದ್ಯಾನಗಳು ಹಾಗೂ ಮುಜರಾಯಿ ದೇವಸ್ಥಾನಗಳ ಆವರಣದಲ್ಲಿ ಸಂಘಟನೆಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ಸರ್ಕಾರ ಆರ್ಎಸ್ಎಸ್ ಅನ್ನು ಗುರಿಯಾಗಿಸಿಕೊಂಡಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟನೆ ನೀಡಿದ್ದಾರೆ. ‘ಆರ್ಎಸ್ಎಸ್ನವರು ಯಾಕೆ ಈ ವಿಚಾರವನ್ನು ತಮ್ಮ ಮೇಲೆ ಹಾಕಿಕೊಳ್ಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನಾವು ಎಲ್ಲಿಯೂ ಆರ್ಎಸ್ಎಸ್ ಹೆಸರನ್ನು ಹೇಳಿಲ್ಲ’ ಎಂದು ಅವರು ಹೇಳಿದರು. ಹಲವು ಸಂಘಟನೆಗಳು ನೋಂದಣಿಯಾಗಿಲ್ಲ. ಅಂತಹ ಸಂಘಟನೆಗಳು ಯಾವುವು ಎಂಬುದೂ ಸರ್ಕಾರಕ್ಕೆ ತಿಳಿದಿಲ್ಲ. ಶಾಲಾ ಮೈದಾನ, ಉದ್ಯಾನ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಯಾರ್ಯಾರು ಬಳಸುತ್ತಿದ್ದಾರೆ ಎಂಬ ಮಾಹಿತಿ ಸರ್ಕಾರದ ಬಳಿ ಇರಬೇಕು ಎಂದರು. ಶಾಲಾ ಮೈದಾನಗಳನ್ನು ಬಳಸುವ ಸಂಘಟನೆಗಳ ಚಟುವಟಿಕೆಗಳಿಂದ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬುದನ್ನೂ ಗಮನಿಸಬೇಕಿದೆ. ನೋಂದಾಯಿತ ಸಂಘಟನೆಗಳು ನಿಯಮಾನುಸಾರ ಕಾರ್ಯಕ್ರಮ ನಡೆಸಿದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಅನಧಿಕೃತ ಸಂಘಟನೆಗಳಿಗೆ ಅವಕಾಶ ನೀಡಬಾರದು ಎಂದು ಸಚಿವರು ಸ್ಪಷ್ಟಪಡಿಸಿದರು.



