ಉಡುಪಿ: ಬನ್ನಂಜೆಯ ಸರಕಾರಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ಸುಮಾರು ಐದು ವರ್ಷದ ಬಾಲಕಿಯನ್ನು ರಕ್ಷಿಸಿದ ಘಟನೆ ನಡೆದಿದೆ. ರಕ್ಷಿಸಲ್ಪಟ್ಟ ಬಾಲಕಿಯನ್ನು ದೊಡ್ಡಣಗುಡ್ಡೆಯ ಮಕ್ಕಳ ಕಲ್ಯಾಣ ಸಮಿತಿ ಕಚೇರಿಗೆ ದಾಖಲಿಸಲಾಗಿದ್ದು, ಸಮಿತಿಯ ಆದೇಶದಂತೆ ಲಕ್ಷ್ಮೀ ನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿತ್ತು.

ವಿಚಾರಣೆಯಲ್ಲಿ ಮಗುವಿನ ತಾಯಿ ಗದಗ ಮೂಲದವರಾಗಿದ್ದು, ಪತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜೀವನೋಪಾಯಕ್ಕಾಗಿ ಮಗುವಿನೊಂದಿಗೆ ಉಡುಪಿಗೆ ವಲಸೆ ಬಂದಿರುವುದು ತಿಳಿದುಬಂದಿದೆ. ಉದ್ಯೋಗ ದೊರಕಿದರೂ ವಾಸಿಸಲು ಸ್ಥಳವಿಲ್ಲದ ಕಾರಣ ತಾಯಿ-ಮಗಳು ಬಸ್ ನಿಲ್ದಾಣದಲ್ಲೇ ದಿನ ಕಳೆಯಬೇಕಾದ ಪರಿಸ್ಥಿತಿ ಎದುರಾಗಿತ್ತು.ಹಲವಾರು ದಿನಗಳಿಂದ ಬಸ್ ನಿಲ್ದಾಣದಲ್ಲೇ ತಂಗಿದ್ದ ತಾಯಿ ಕೆಲಸಕ್ಕೆ ತೆರಳುವ ವೇಳೆ ಮಗು ಅಲ್ಲಿಯೇ ಉಳಿದುಕೊಳ್ಳುತ್ತಿತ್ತು. ಇದೀಗ ತಾಯಿಗೆ ಉದ್ಯೋಗದಾತರಿಂದ ವಸತಿ ವ್ಯವಸ್ಥೆ ಕಲ್ಪಿಸಲ್ಪಟ್ಟಿದ್ದು, ಆಕೆಯ ಮನವಿ ಮೇರೆಗೆ ಮಗುವನ್ನು ತಾಯಿಯ ವಶಕ್ಕೆ ಹಸ್ತಾಂತರಿಸಲಾಗಿದೆ. ತಾಯಿ ಹಾಗೂ ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಮಗು ಅನಾಥ ಸ್ಥಿತಿಯಲ್ಲಿ ಇರುವ ಬಗ್ಗೆ ಗಸ್ತು ಕರ್ತವ್ಯದಲ್ಲಿದ್ದ ಅಕ್ಕ ಪಡೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ಮಗುವನ್ನು ರಕ್ಷಿಸಲಾಯಿತು. ಅಕ್ಕ ಪಡೆ ಸಿಬ್ಬಂದಿಗಳಾದ ರಕ್ಷಿತಾ, ವನಿತಾ, ತುರ್ತು ಸಹಾಯವಾಣಿ ಕೇಂದ್ರದ ಸಿಬ್ಬಂದಿ, ಮಕ್ಕಳ ರಕ್ಷಣಾ ಘಟಕದ ಪ್ರಕಾಶ್ ಮತ್ತು ವಿದ್ಯಾಶ್ರೀ ಈ ಕಾರ್ಯಾಚರಣೆ ನಡೆಸಿದ್ದರು.



