ಉಡುಪಿ: ಉಡುಪಿಯ 80 ಬಡಗುಬೆಟ್ಟುವಿನಲ್ಲಿ ಸುಮಾರು 13 ಎಕರೆ ಜಾಗವನ್ನು ಅತಿಕ್ರಮಣ ಮಾಡಿ ಕಂಬಳಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು.ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧ ನಡೆಯುತ್ತಿರುವ ಆರೋಪಗಳು ಅಕ್ರಮಗಳನ್ನು ಮುಚ್ಚಿಹಾಕುವ ಪ್ರಯತ್ನ ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅನುಭವದ ಕೊರತೆ ಇದೆ. ನನ್ನ ವಿರುದ್ಧ ಅಪವಾದ ಹಾಕುವ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.

ಕಂಬಳ ಜನಪದ ಕ್ರೀಡೆ. ಇದಕ್ಕೆ ನನ್ನ ವಿರೋಧ ಇಲ್ಲ. ಆದರೆ ಬಡಗುಬೆಟ್ಟುವಿನಲ್ಲಿ ಕಂಬಳಕ್ಕೆ ಸೂಚಿಸಿದ್ದ ಜಾಗ ಇನ್ನೂ ಕಂಬಳ ಸಮಿತಿಗೆ ಹಸ್ತಾಂತರವಾಗಿಲ್ಲ. ಅರಣ್ಯ ಇಲಾಖೆಯ ಜಾಗ ಉಲ್ಲಂಘಿಸಿರುವ ಬಗ್ಗೆ ಪ್ರಕರಣವೂ ದಾಖಲಾಗಿದೆ. ಕಂಬಳ ನಡೆಸಲು ಕೆಲ ಷರತ್ತುಗಳಿದ್ದರೂ ಅವುಗಳನ್ನು ಉಲ್ಲಂಘಿಸಿ 13 ಎಕರೆ ಜಾಗ ಅತಿಕ್ರಮಣ ಮಾಡಲಾಗಿದೆ. ಆ ಭಾಗದಲ್ಲಿ ಬಹಳ ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಇನ್ನೂ ಸರಿಯಾದ ಹಕ್ಕುಪತ್ರ ಸಿಕ್ಕಿಲ್ಲ. 40 ವರ್ಷಗಳಿಂದ ಕೃಷಿ ಮಾಡುತ್ತಿರುವವರ ಹಕ್ಕುಗಳನ್ನು ಪರಿಗಣಿಸದೇ ಸರ್ವಾಧಿಕಾರಿ ಧೋರಣೆಯಲ್ಲಿ ಅತಿಕ್ರಮಣ ನಡೆದಿದೆ ಎಂದು ಹೇಳಿದರು.

ಜಿಲ್ಲಾಡಳಿತದ ಮಟ್ಟದಲ್ಲಿ ಕಂಬಳ ಸಮಿತಿ ರಚನೆಯಾಗಿಲ್ಲ. ಜಿಲ್ಲಾಡಳಿತದಿಂದ ಜಾಗ ಹಸ್ತಾಂತರವೂ ಆಗಿಲ್ಲ. ಈ ವಿಷಯವನ್ನು ತಹಶೀಲ್ದಾರ್ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇನೆ. ಜಿಲ್ಲಾಡಳಿತದ ಅನುಮತಿ ಪಡೆಯದೇ ಗುದ್ದಲಿ ಪೂಜೆ ನೆರವೇರಿಸಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಬಿಜೆಪಿ ಮುಖಂಡರನ್ನು ಸೇರಿಸಿ ಸಭೆ ನಡೆಸಿ ಎಂದೂ ಹೇಳಿಲ್ಲ. ವಿವಾದವನ್ನು ಸೃಷ್ಟಿಸಿ ಅದನ್ನು ನನ್ನ ಮೇಲೆ ಹಾಕುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಎಲ್ಲವನ್ನೂ ವ್ಯಾಪಾರಿ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಲಿ ಎಂದು ಕಿವಿಮಾತು ಹೇಳಿದರು. ಬಡಗುಬೆಟ್ಟುವಿನಲ್ಲಿ ಕಂಬಳ ನಡೆಸಲು ಸಮಸ್ಯೆ ಇದೆ ಎಂದು ಜಿಲ್ಲಾಡಳಿತವೇ ಹಿಂದೆ ರದ್ದುಗೊಳಿಸಿತ್ತು. ಕಂಬಳಕ್ಕೆ ನನ್ನ ವಿರೋಧವಿಲ್ಲ. ಆದರೆ ಸ್ಥಳೀಯರ ಸಮಸ್ಯೆಗಳನ್ನು ಪರಿಹರಿಸಿ, ವಿಶ್ವಾಸಕ್ಕೆ ತೆಗೆದುಕೊಂಡು, ಕಾನೂನುಬದ್ಧವಾಗಿ ಕಾರ್ಯಕ್ರಮ ನಡೆಸಬೇಕು ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಸಂತೋಷ್ ಕುಲಾಲ್, ಸಂತೋಷ್ ಕುಮಾರ್ ಭೈರಂಪಳ್ಳಿ ಹಾಗೂ ಇಸ್ಮಾಯಿಲ್ ಉಪಸ್ಥಿತರಿದ್ದರು.



