Friday, March 6, 2026

spot_img

ಬಜೆಟ್‌ನಲ್ಲಿ ಬಡವರಿಗೆ ನ್ಯಾಯ ಇಲ್ಲ: ಕೋಟ ಶ್ರೀನಿವಾಸ ಪೂಜಾರಿ ಟೀಕೆ..

ಉಡುಪಿ : ರಾಜ್ಯ ಬಜೆಟ್ ಕುರಿತು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರೂ ಬಡವರಿಗೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು. ರಾಜ್ಯ ಭಾರೀ ವಿತ್ತೀಯ ಕೊರತೆಯನ್ನು ಅನುಭವಿಸಬೇಕಾದ ಪರಿಸ್ಥಿತಿಯ ಬಜೆಟ್ ಇದಾಗಿದೆ. ಹಿಂದುಳಿದ ವರ್ಗಗಳಿಗೆ ಯಾವುದೇ ವಿಶೇಷ ಸಹಾಯ ಘೋಷಿಸಲಾಗಿಲ್ಲ. ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯಕ್ಕಾಗಿ ಕಾಯುತ್ತಿರುವ ಪರಿಸ್ಥಿತಿ ಇದ್ದರೂ, ಈ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟ ಕ್ರಮಗಳಿಲ್ಲ ಎಂದು ಹೇಳಿದರು.

ಅಲ್ಪಸಂಖ್ಯಾತರಿಗೆ ನೀಡಿರುವ ನೆರವಿಗೆ ವಿರೋಧವಿಲ್ಲ, ಏಕೆಂದರೆ ಅವರಲ್ಲೂ ಬಡವರು ಇದ್ದಾರೆ. ಆದರೆ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಕ್ಕೂ ಸಮಾನ ಸಹಾಯ ನೀಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು. ಹಿಂದುಳಿದ ವರ್ಗಗಳ ಯಾವುದೇ ನಿಗಮಗಳಿಗೆ ಅನುಕೂಲವಾಗುವ ಘೋಷಣೆಗಳೂ ಇಲ್ಲ ಎಂದು ಟೀಕಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ. ಇದರಿಂದ ಸುಮಾರು 36 ಸಾವಿರ ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ಅವರು ಆರೋಪಿಸಿದರು. ಆ ಹಣವನ್ನು ಸಂಬಂಧಿಸಿದ ಸಮುದಾಯಗಳಿಗೆ ವಾಪಸು ನೀಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಬಜೆಟ್‌ನಲ್ಲಿ ಈಡೇರಿಸಿಲ್ಲ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳದ ಬಗ್ಗೆ ಘೋಷಣೆ ಮಾಡಿಲ್ಲ. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದರೂ ಅದಕ್ಕೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನ ಸಾಧನೆಯಂತೆ ಬಿಂಬಿಸಲು ಪ್ರಯತ್ನಿಸಿದೆ. ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಕುಬೂದಿ ಎರಚಿದ್ದಾರೆ ಎಂದು ಟೀಕಿಸಿದರು. ಕರಾವಳಿ ಭಾಗದ ಮೀನುಗಾರರನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಉಡುಪಿ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡುವ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದು ಬಡವರ ವಿರುದ್ಧವಾದ ಬಜೆಟ್. ಕರಾವಳಿ ಜಿಲ್ಲೆಗಳ ಬಗ್ಗೆ ರಾಜ್ಯ ಸರ್ಕಾರ ವಿರೋಧಭಾವನೆ ತೋರಿಸುತ್ತಿದೆ. ಇಲ್ಲಿ ಬಿಜೆಪಿ ಶಾಸಕರು ಹೆಚ್ಚು ಗೆದ್ದಿರುವ ಕಾರಣ ಹಗೆ ತೀರಿಸುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಕ್ರೀಡಾ ಇಲಾಖೆಯಿಂದ ಅನುದಾನ ದೊರಕುವ ನಿರೀಕ್ಷೆ ಸುಳ್ಳಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles