ಬೆಂಗಳೂರು : ಎನ್.ಬಿ.ಸಿ ಕೋಡ್ (National Building Code) ಪ್ರಕಾರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಒಂದೇ ನಿಯಮ ಇದೆ ಹಾಗಾಗಿ ತಾರತಮ್ಯ ಮಾಡದೇ ಸರ್ಕಾರಿ ಆಸ್ಪತ್ರೆಗೆ ಫೈರ್ ಕ್ಲಿಯರೆನ್ಸ್ ಗೆ ಎಷ್ಟು ಸಮಯವಕಾಶ ನೀಡಲಾಗುತ್ತಿದೆಯೊ ಖಾಸಗಿ ಆಸ್ಪತ್ರೆಗಳಿಗೂ ಅಷ್ಟೇ ಸಮಯವಕಾಶ ನೀಡಿ, ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚು ಕಾಲಾವಕಾಶ ನೀಡಿ ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಕಾಲಾವಕಾಶ ನೀಡಲಾಗುತ್ತಿದೆ ಎಂದು ಸೋಮವಾರ ವಿಧಾನ ಪರಿಷತ್ತಿನಲ್ಲಿ ನಡೆದ 156 ನೇ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಕೇಳಿದರು. ಕರ್ನಾಟಕ ರಾಜ್ಯದಲ್ಲಿ 2878 ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 14 ಮಾತ್ರ ಫೈರ್ ಕ್ಲಿಯರೆನ್ಸ್ ಆಗಿದೆ ಅಂದರೆ ಶೇ 00.5% ಮಾತ್ರ, 5850 ಖಾಸಗಿ ಆಸ್ಪತ್ರೆಗಳಲ್ಲಿ 315 ಮಾತ್ರ ಫೈರ್ ಕ್ಲಿಯರೆನ್ಸ್ ಅಂದರೆ ಶೇ .005% ಮಾತ್ರ ಆಗಿದೆ, ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಫೈರ್ ಸೇಫ್ಟಿ ಕ್ಲಿಯರೆನ್ಸ್ ತೆಗೆದುಕೊಳ್ಳಲು ಎಷ್ಟು ಕಾಲಾವಕಾಶ ಬೇಕು ಎಂದು ಕೇಳಿದರು.

ಕೇವಲ 2 ವರ್ಷದಲ್ಲಿ ರಾಜ್ಯದ 5 ಜಿಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಹಿಂದೆ 2014ರಲ್ಲೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅವರು ತೀವ್ರ ನಿಗಾ ಘಟಕದಲಿದ್ದ 28 ನವಜಾತ ಶಿಶುಗಳು ಮತ್ತು 18 ದೊಡ್ಡ ಮಕ್ಕಳನ್ನು ಒಟ್ಟು 46 ಮಕ್ಕಳನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು, 46 ಜೀವಗಳನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿತ್ತು ಇದರಲ್ಲಿ ಸರ್ಜಿ ಆಸ್ಪತ್ರೆ ಸಫಲ ಆಗಿದೆ, ಆದ್ದರಿಂದ ಮುಂದೆ ಈ ಘಟನೆಗಳು ಮರುಕಳಿಸದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಫೈರ್ ಸೇಫ್ಟಿ ಕ್ಲಿಯರೆನ್ಸ್ ಮಾಡಬೇಕು ಎಂದು ಒತ್ತಾಯಿಸಿದರು. ಆಯುಷ್ಮಾನ್ ಭಾರತ್ ಯೋಜನೆ ಅಡಿ ಸರ್ಕಾರ 63 ಲಕ್ಷ ರೋಗಿಗಳನ್ನು ಚಿಕಿತ್ಸೆ ನೀಡಿದೆ ಇದರಲ್ಲಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇರುವಂತಹ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತದೆ ಆದರೆ ಕೆ.ಪಿ,ಎಂ.ಎ ಪ್ರಕಾರ ಫೈರ್ ಸೇಫ್ಟಿ ಕ್ಲಿಯರೆನ್ಸ್ ಮಾತ್ರ ಇಲಾಖೆ ಕೊಡುತ್ತಿಲ್ಲ ಇದರಿಂದ ಲಕ್ಷಾಂತರ ರೋಗಿಗಳಿಗೆ ಅನ್ಯಾಯವಾಗುತ್ತಿದೆ ಹಾಗಾಗಿ ನಿಯಮ ಸಡಿಲಿಕರಣಗೊಳಿಸಲು ಮಹರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ವೈದ್ಯಕೀಯ ಸಂಸ್ಥೆಗಳಿಗೆ ಪ್ರತ್ಯೇಕ ಅಗ್ನಿ ಸುರಕ್ಷತಾ ಕಾಯ್ದೆಯನ್ನು ತರಲಾಗಿದೆ ಆದ್ದರಿಂದ ಕರ್ನಾಟಕದಲ್ಲೂ ಈ ಕಾಯ್ದೆ ತರವುಂತಾಗಬೇಕು ಎಂದು ಕೋರಿದರು.
ಇದಕ್ಕೆ ಪ್ರತ್ಯತ್ತರ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ 40 ರಿಂದ 50 ವರ್ಷಗಳ ಹಳೆಯ ಸರ್ಕಾರಿ ಆಸ್ಪತ್ರೆಗಳಿವೆ, ಅಂತಹ ಆಸ್ಪತ್ರೆಗಳಿಗೆ ಈಗೀರುವ ಮಾನದಂಡದ ಪ್ರಕಾರ ಫೈರ್ ಸೇಫ್ಟಿ ಕ್ಲಿಯರೆನ್ಸ್ ಸಿಗುವುದು ಕಷ್ಟವಾಗುತ್ತಿದೆ. ಇದಕ್ಕೆ ಸುಮಾರು 550 ಕೋಟಿ ಅನುದಾನ ಬೇಕಾಗುತ್ತದೆ, ಏಕಕಾಲದಲ್ಲಿ ಎಲ್ಲವನ್ನು ಮಾಡುವುದಕ್ಕಾಗುವುದಿಲ್ಲ ಹಂತಹಂತವಾಗಿ ಮಾಡುತ್ತೇವೆ ಎಂದು ಉತ್ತರಿಸಿದರು. ಡಾ.ಧನಂಜಯ ಸರ್ಜಿ ಅವರ ಸಲಹೆಯನ್ನು ತೆಗೆದುಕೊಂಡು ಅಗ್ನಿಶಾಮಕ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸುತ್ತೇನೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯ ಕಟ್ಟಡಗಳಿಗೆ ಸ್ವಲ್ಪ ವಿನಾಯಿತಿ ನೀಡಿ, ನಿಯಮ ಸಡೀಲೀಕರಣಗೊಳಿಸಲು ಮನವಿ ಮಾಡಿದ್ದೇವೆ ಈ ಬಗ್ಗೆ ಗೃಹ ಇಲಾಖೆ ಜೊತೆಯಲ್ಲೂ ಸಭೆ ನಡೆಸುತ್ತೇನೆ. ಈ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.