ಉಡುಪಿ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ರಾಜಿ ಪಂಚಾಯಿತಿಯ ವೇಳೆ ಮಲ್ಪೆಯ ಸ್ಥಳೀಯ ಮೀನುಗಾರ ಮುಖಂಡನಿಗೆ ಇರಿತ ನಡೆದ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ.
ಗಾಯಾಳುವನ್ನು ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಎಂದು ಗುರುತಿಸಲಾಗಿದೆ. ಇವರು ಮಲ್ಪೆ ಭಾಗದ ಸ್ಥಳೀಯ ಮೀನುಗಾರ ಮುಖಂಡರಾಗಿದ್ದಾರೆ.

ಮಲ್ಪೆಯ ಯುವಕನೊಬ್ಬ ಮತ್ತು ಪಡುಬಿದ್ರಿ ಪಲಿಮಾರು ಪರಿಸರದ ಯುವತಿಯ ನಡುವೆ ಪ್ರೇಮ ಸಂಬಂಧ ಇದ್ದ ಹಿನ್ನೆಲೆಯಲ್ಲಿ ರಾಜಿ ಮಾತುಕತೆ ನಡೆಸಲು ಎರಡೂ ಕಡೆಯವರು ಸೇರಿದ್ದರು ಎನ್ನಲಾಗಿದೆ.

ಈ ವೇಳೆ ಮಾತುಕತೆ ತೀವ್ರಗೊಂಡು, ಯುವತಿಯ ಕಡೆಯವರಲ್ಲಿದ್ದ ಕೆಲವರು ಮಂಜು ಕೊಳ ಅವರಿಗೆ ಇರಿದಿರುವುದಾಗಿ ತಿಳಿದುಬಂದಿದೆ. ಗಾಯಗೊಂಡ ಮಂಜು ಕೊಳ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


ಇರಿತ ನಡೆಸಿದ ಆರೋಪಿಗಳನ್ನು ಸ್ಥಳೀಯರು ತಕ್ಷಣವೇ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ಘಟನೆಯ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




