Wednesday, March 4, 2026

spot_img

ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ..!

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣಮಠದಲ್ಲಿ ನಡೆಯಲಿರುವ ಬೃಹತ್ ಲಕ್ಷ ಕಂಠ ಗೀತಾ ಪಾರಾಯಣ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉಡುಪಿ ಭೇಟಿ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ನೀಡಿದ ಮಾಹಿತಿಯ ಪ್ರಕಾರ, ಪ್ರಧಾನ ಮಂತ್ರಿಯವರ ಆಗಮನದ ಕಾರಣದಿಂದ ಸಂಪೂರ್ಣ ಕಾರ್ಯಕ್ರಮವು ಮೊದಲು ನಿಗದಿಯಾಗಿದ್ದ ವೇಳಾಪಟ್ಟಿಗಿಂತ 40 ನಿಮಿಷ ಮುಂದಕ್ಕೆ ಸರಿಸಲಾಗಿದೆ. ರೋಡ್‌ಶೋ ಸಹ ಬೆಳಗ್ಗೆ 11.00ರಿಂದ 11.30ರ ನಡುವೆ ನಡೆಯಲಿದೆ.

 ಪ್ರಧಾನ ಮಂತ್ರಿಯವರು ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮಿಸುವುದು ನಿಗದಿಯಾಗಿದ್ದು, ಆಗಮನದ ನಂತರ ಶ್ರೀ ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆದು, ಗೀತಾಮಂದಿರಕ್ಕೆ ಭೇಟಿ ನೀಡಲಿದ್ದಾರೆ.  ಅವರು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದ ಅವರೊಂದಿಗೆ ಮಾತುಕತೆ ನಡೆಸಿ ಬಳಿಕ ಪಾರ್ಕಿಂಗ್ ಪ್ರದೇಶದ ಸಮೀಪ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಮಹಾಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಪ್ರಧಾನ ಮಂತ್ರಿಯವರು ಉಡುಪಿಯಿಂದ ನಿರ್ಗಮಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಧಾನ ಮಂತ್ರಿಯವರ ಭೇಟಿಯ ಹಿನ್ನೆಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಎಸ್‌ಪಿಜಿ, ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ವಿಭಾಗ, ಇವರ ಜೊತೆಗೆ ಸ್ಥಳೀಯ ಪೊಲೀಸ್ ಸಿಬ್ಬಂದಿಗಳನ್ನೂ ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.

 ಗುರುವಾರ ಬೆಳಗ್ಗೆಯೇ ಭದ್ರತಾ ಸಿಬ್ಬಂದಿಗಳಿಂದ ಮಾಕ್ ಡ್ರಿಲ್ ನಡೆಸಲಾಗಿದ್ದು, ನಗರದ ಹೃದಯ ಭಾಗದಲ್ಲಿರುವ ಪ್ರಮುಖ ಪ್ರದೇಶಗಳಲ್ಲಿ ಸರ್ಪಗಾವಲು ಭದ್ರತಾ ವ್ಯವಸ್ಥೆ ಜಾರಿಗೆ ತರಲಾಗಿದೆ.

ಮೋದಿ ಸಾಗುವ ಮಾರ್ಗದಲ್ಲಿ ಬಾಂಬ್ ಸ್ಕ್ವಾಡ್‌, ಶ್ವಾನ ದಳ ಹಾಗೂ ತಾಂತ್ರಿಕ ತಂಡಗಳ ಸಹಾಯದಿಂದ ಇಂಚಿಂಚು ಪ್ರದೇಶಗಳನ್ನು ಪರಿಶೀಲಿಸಲಾಗುತ್ತಿದೆ. ಆದಿ ಉಡುಪಿ, ಕರಾವಳಿ, ಬನ್ನಂಜೆ ಸಿಟಿ ಬಸ್ ನಿಲ್ದಾಣ, ಪಾರ್ಕಿಂಗ್ ಪ್ರದೇಶ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ವಿಶೇಷ ಕಣ್ಗಾವಲು ಇರಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles