ಉಡುಪಿ : ನಮ್ಮ ದೇಶದ ಎಲ್ಲಾ ಕಲೆಗಳು ಪೌರಾಣಿಕ ಹಿನ್ನಲೆಯನ್ನು ಪಡೆದುಕೊಂಡಿವೆ, ನಮ್ಮ ಪುರಾಣದ ಕಥೆಗಳು ಇದಕ್ಕೆ ಉದಾಹರಣೆ. ನಮ್ಮ ಹಿರಿಯರು ಪೌರಾಣಿಕ ಪ್ರಸಂಗಗಳನ್ನು ಕಲಿತಿರುವುದೇ ಈ ಯಕ್ಷಗಾನದಿಂದಾಗಿ. ಹೀಗಾಗಿ ಅಂದು ನರಹರಿ ತೀರ್ಥರಿಂದ ಆರಂಭಗೊoಡಿದೆ ಎನ್ನಲಾದ ಈ ಯಕ್ಷಗಾನವನ್ನು ಉಳಿಸಿ ಬೆಳೆಸುವ ಆವಶ್ಯಕತೆಯಿದೆ ಎಂದು ಅದಮಾರು ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಅವರು ಉಡುಪಿ ಪುತ್ತೂರಿನ ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ಭಗವತಿ ಯಕ್ಷ ಕಲಾ ಬಳಗದ ವತಿಯಿಂದ ನವರಾತ್ರಿ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ 11 ದಿನಗಳ ಕಾಲ ನಡೆದ ‘ಯಕ್ಷ ನವಮಿ 2025’ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಯಕ್ಷಗಾನವನ್ನು ಕಲಿಸಲು ತಂದೆತಾಯಿಗಳು ಮುಂದಾಗಬೇಕು. ಇದರಿಂದ ಮಕ್ಕಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಪ್ರಜ್ಞಾವಂತ ನಾಗರಿಕರಾಗುತ್ತಾರೆ. ಅಲ್ಲದೆ ಯಕ್ಷಗಾನವನ್ನು ಕಲಿತ ಮಕ್ಕಳು ಶಿಕ್ಷಣದಲ್ಲೂ ಉತ್ತಮ ಸಾಧನೆ ಮಾಡಿರುವುದನ್ನು ಕಂಡಿದ್ದೇವೆ. ಹೀಗಾಗಿ ಯಕ್ಷಗಾನ ಕಲಿತರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ ಎಂಬ ಅಳುಕು ಹೆತ್ತವರಿಗೆ ಬೇಡ ಎಂದು ಅವರು ತಿಳಿಸಿದರು. ಯಕ್ಷ ಶಿಕ್ಷಣ ಹಾಗೂ ರಂಗ ಶಿಕ್ಷಣವನ್ನು ಇಂದು ಶಾಲಾ ಕಾಲೇಜು ಮಕ್ಕಳಿಗೆ ನೀಡಲಾಗುತ್ತಿದೆ. ಸುಮಾರು 3000 ಕ್ಕೂ ಅಧಿಕ ಮಕ್ಕಳು ಪ್ರತೀ ವರ್ಷ ಯಕ್ಷಗಾನವನ್ನು ಕಲಿಯುತ್ತಿದ್ದಾರೆ. ಅದೇ ರೀತಿ ರಂಗಭೂಮಿ ಉಡುಪಿ ವತಿಯಿಂದ ಈ ಬಾರಿ 20 ಪ್ರೌಢಶಾಲೆಗಳಲ್ಲಿ ನಾಟಕ ಅಭಿನಯವನ್ನು ಕಲಿಸುವ ರಂಗಶಿಕ್ಷಣವನ್ನು ನೀಡಲಾಗುತ್ತಿದೆ. ಈ ಅಭಿಯಾನದಿಂದ ಭವಿಷ್ಯದಲ್ಲಿ ಉತ್ತಮ ಯಕ್ಷಗಾನ ಕಲಾವಿದರು ಹಾಗೂ ರಂಗನಟರು ಸಿಕ್ಕಿ ಉಡುಪಿಯ ಕೀರ್ತಿ ಪತಾಕೆಯನ್ನು ಜಗದಗಲಕ್ಕೆ ಹರಡಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಸಿದ್ಧ ಸ್ತ್ರೀ ವೇಷಧಾರಿ, ಕಲಾವಿದ ಸಂತೋಷ್ ಹಿಲಿಯಾಣ ಇವರಿಗೆ 7ನೇ ವರ್ಷದ ‘ಯಕ್ಷ ಪ್ರದೀಪ್ತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ 10 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ವೀಣಾ ಎಸ್. ಶೆಟ್ಟಿ, ಕರ್ನಾಟಕ ಬ್ಯಾಂಕಿನ ಸ್ಥಳೀಯ ಶಾಖೆಯ ಎಜಿಎಂ ವಾದಿರಾಜ ಭಟ್, ಯುವ ಉದ್ಯಮಿ ನಾಗರಾಜ್ ಎಸ್.ಕೆ., ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಮೋದ್ ತಂತ್ರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು.