ಉಡುಪಿ: ಸರಕಾರಿ ಕ್ವಾಟ್ರಸ್ ಗಳಿಗೆ ಪೊಲೀಸ್ ಜ್ಯಾಕೆಟ್ ನಲ್ಲಿ ಬಂದಿದ್ದ ಕಳ್ಳರ ಗ್ಯಾಂಗ್, ನುಗ್ಗಿ ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ನಗರದ ಮಿಷನ್ ಕಾಂಪೌಂಡ್ ಬಳಿ ಇರುವ ಸರಕಾರಿ ವಸತಿ ಸಮುಚ್ಚಯದ ಮನೆಗಳಿಗೆ ಜುಲೈ 19ರಂದು ರಾತ್ರಿ ವೇಳೆ ಕಳ್ಳರು ನುಗ್ಗಿದ್ದಾರೆ. ಬಳಿಕ ಮನೆಯ ಬೀಗ ಒಡೆದು, ಮನೆಯನ್ನೆಲ್ಲ ಜಾಲಾಡಿ ಚಿನ್ನ, ಬೆಳ್ಳಿ, ನಗದು ಹೀಗೆ ಲಕ್ಷಾಂತರ ಮೌಲ್ಯದ ವಸ್ತು ಕಳವು ಮಾಡಿದ್ದಾರೆ.

ಬೀಗ ಹಾಕಿದ್ದ ಮನೆಯನ್ನೇ ಟಾರ್ಗೆಟ್ ಮಾಡಿ ಸರಣಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಮುಂಜಾನೆ 4ರಿಂದ 4:30 ರ ಸುಮಾರಿಗೆ ಕೃತ್ಯ ನಡೆದಿದ್ದು, ಕಳ್ಳರ ಕೃತ್ಯ ಸಿಸಿಟಿವಿ ಸೆರೆಯಾಗಿದೆ. ಇನ್ನು ಕೂಗಳತೆ ದೂರದಲ್ಲಿ ಪೊಲೀಸ್ ಠಾಣೆಯಿದ್ದರೂ ಕೂಡ ಕಳ್ಳರು ಪೊಲೀಸ್ ಜಾಕೆಟ್ ಬಳಸಿ ಕಳ್ಳತನ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ 29ರಂದು ಕಂದಾಯ ಇಲಾಖೆಗೆ ಸಂಬಂಧಿಸಿದ ಇದೇ ವಸತಿ ಸಮುಚ್ಚಯದ ಆರು ಮನೆಗಳಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ವೌಲ್ಯದ ನಗ-ನಗದು ಕಳವು ಮಾಡಿ ಪರಾರಿಯಾಗಿದ್ದರು. ಇದುವರೆಗೇ ಈ ಪ್ರಕರಣದಲ್ಲಿ ಯಾವುದೇ ಅರೋಪಿಗಳು ಸೆರೆಯಾಗಿಲ್ಲ, ಆದರೆ ಮತ್ತೆ 9 ತಿಂಗಳ ಬಳಿಕ ಅದೇ ಕ್ವಾಟ್ರಸ್ ನ ಮೂರು ಮನೆಗಳಲ್ಲಿ ಕಳ್ಳತನ ನಡೆದಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಕ್ವಾಟ್ರಸ್ ಒಳಗೆ ಕಳ್ಳರು ಆಗಮಿಸುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಲಾಗಿದ್ದು, ಇದೇ ಆಧಾರವಾಗಿಟ್ಟು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.