ಉಡುಪಿ: ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸು ಫ್ರಂ ಸೋ ಸಿನೆಮಾದಲ್ಲಿನ ದೃಶ್ಯದಂತೆ ಕಿಡಿಗೇಡಿಯೊಬ್ಬನು ಸ್ನಾನಗೃಹಗಳಿಗೆ ಇಣುಕಿ ಪರಾರಿಯಾಗುವ ಘಟನೆಗಳು ಕಳೆದ ಎರಡು ದಿನಗಳಿಂದ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಬ್ರಹ್ಮಾವರ ತಾಲೂಕು ಪಾಂಡೇಶ್ವರ ನಿರಾಡಿಜಡ್ಡು ಪ್ರದೇಶದಲ್ಲಿ ಸೋಮವಾರ ಸಂಜೆ ಮನೆೊಂದರಲ್ಲಿ ಮಹಿಳೆ ಸ್ನಾನ ಮಾಡುತ್ತಿರುವ ವೇಳೆ ಸ್ನಾನಗೃಹದ ಹಂಚು ತೆಗೆದು ಮೊಬೈಲ್ ಮೂಲಕ ವಿಡಿಯೋ ತೆಗೆಯಲು ಯತ್ನಿಸಿದನು. ಮಹಿಳೆ ಕಿರುಚುತ್ತಿದ್ದಂತೆ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಾದ ಬಳಿಕ ಮಂಗಳವಾರ ಪಾಂಡೇಶ್ವರ ಮುಖ್ಯರಸ್ತೆ ಸಮೀಪದ ಮತ್ತೊಂದು ಮನೆಯಲ್ಲಿ ಮಹಿಳೆ ಸ್ನಾನ ಮಾಡುತ್ತಿರುವ ಸಂದರ್ಭ ಕಿಟಕಿಯ ಮೂಲಕ ಇಣುಕಿ ಪರಾರಿಯಾದ ಘಟನೆ ನಡೆದಿದೆ. ಆರೋಪಿಯ ಪತ್ತೆಗೆ ಕೋಟ ಪೊಲೀಸರು ಹಾಗೂ ಗ್ರಾಮಸ್ಥರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು, ಪೊಲೀಸ್ ಇಲಾಖೆ ಬಲೆ ಬೀಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



