ಉಡುಪಿ: ಶ್ರೀ ಕೃಷ್ಣಮಠದ ಪರಂಪರೆಯಲ್ಲಿನ ಹಿಂದೂ–ಮುಸ್ಲಿಂ ಸೌಹಾರ್ದತೆಯನ್ನು ಮುಂದುವರಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ 2026ರ ಶೀರೂರು ಮಠದ ಪರ್ಯಾಯ ಸಂದರ್ಭದಲ್ಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಮಿತಿಯ ಅಧ್ಯಕ್ಷ ಹಾಜಿ ಕೆ. ಅಬೂಬಕ್ಕರ್ ಪರ್ಕಳ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜನವರಿ 9ರಂದು ನಡೆಯುವ ಪುರಪ್ರವೇಶ ಮೆರವಣಿಗೆಯಲ್ಲಿ ಭಾಗವಹಿಸುವ ಸಾವಿರಾರು ಭಕ್ತರಿಗೆ ಸಮಿತಿ ವತಿಯಿಂದ ತಂಪು ಪಾನೀಯ ವಿತರಿಸಲಾಗುವುದು. ಇದಲ್ಲದೆ ಜನವರಿ 13ರಂದು ಜೋಡುಕಟ್ಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಮುಸ್ಲಿಮರ ಸಾಂಸ್ಕೃತಿಕ ಕಲೆಯಾದ ದಫ್ ವಾದನಕ್ಕೂ ಅವಕಾಶ ನೀಡಲಾಗಿದೆ.

ಪರ್ಯಾಯ ದಿನವಾದ ಜನವರಿ 18ರಂದು ಹತ್ತು ಸಾವಿರ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸುವ ಕಾರ್ಯಕ್ರಮವೂ ಆಯೋಜಿಸಲಾಗಿದೆ ಈ ಮೂರು ಕಾರ್ಯಕ್ರಮಗಳಲ್ಲೂ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.



