ಉಡುಪಿ : ಪಂಚಭಾಷಾ ಗಾಯಕ ಡಾ. ಕೆ.ಜೆ. ಯೇಸುದಾಸ್ ಅವರ 86ನೇ ಹುಟ್ಟುಹಬ್ಬವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭ ಯೇಸುದಾಸ್ ಅವರ ಪುತ್ರ ವಿಜಯ್ ಯೇಸುದಾಸ್ ಅವರ ಸಾನ್ನಿಧ್ಯದಲ್ಲಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಹುಟ್ಟುಹಬ್ಬದ ಅಂಗವಾಗಿ ಸ್ವರ್ಣಮುಖಿ ಸಭಾಭವನದಲ್ಲಿ ಕಾಂಞಂಗಾಡ್ ರಾಮಚಂದ್ರನ್ ಹಾಗೂ ಯೇಸುದಾಸ್ ಅವರ ಶಿಷ್ಯರಿಂದ ದಿನವಿಡೀ ಸಂಗೀತಾರ್ಚನೆ ನಡೆಯಿತು. ನಾಲ್ಕು ದಶಕಗಳ ಕಾಲ ಕೊಲ್ಲೂರಿನಲ್ಲಿ ನಿರಂತರವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಬಂದಿದ್ದ ಯೇಸುದಾಸ್, ಕೋವಿಡ್ ಬಳಿಕ ದೇಗುಲಕ್ಕೆ ಆಗಮಿಸಿಲ್ಲ. ಸದ್ಯ ಅವರು ಅಮೆರಿಕಾದಲ್ಲಿ ನೆಲೆಸಿದ್ದು, ಅಲ್ಲಿಯೇ ಶ್ರೀದೇವಿಯ ಉಪಾಸನೆಯೊಂದಿಗೆ ಜನ್ಮದಿನಾಚರಣೆ ಮಾಡಿಕೊಂಡಿದ್ದಾರೆ.

ತಂದೆಯ ಅನುಪಸ್ಥಿತಿಯಲ್ಲಿ ವಿಜಯ್ ಯೇಸುದಾಸ್ ಜನವರಿ 10ರಂದು ಕೊಲ್ಲೂರು ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸಂಗೀತಾರ್ಚನೆ ನೆರವೇರಿಸಿದರು.



