ಉಡುಪಿ : ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂಬ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ್ದ ಅರ್ಜಿಯನ್ನು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿ ಪ್ರವೀಣ್ ಚೌಗುಲೆ ಕೃತ್ಯಕ್ಕೆ ಬಳಸಿದ ಕಾರನ್ನು ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ನೀಡಬೇಕೆಂಬ ಬ್ಯಾಂಕಿನವರ ಅರ್ಜಿಯ ಕುರಿತ ಅಂತಿಮ ಆದೇಶವನ್ನು ವಿಚಾರಣೆ ಮುಗಿಯುವವರೆಗೆ ನ್ಯಾಯಾಲಯ ಕಾಯ್ದಿರಿಸಿದೆ. ಕಾರನ್ನು ಬ್ಯಾಂಕಿನವರಿಗೆ ನೀಡಿದರೆ, ಮುಂದೆ ಅವರು ಅದನ್ನು ಮಾರಾಟ ಮಾಡಿದರೆ ಸಾಕ್ಷ್ಯ ವಿಚಾರಣೆಗೆ ತೊಂದರೆ ಆಗುತ್ತದೆ ಎಂಬುದಾಗಿ ವಿಶೇಷ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು.
ಮುಂದಿನ ವಿಚಾರಣೆಯನ್ನು ಎ.3ಕ್ಕೆ ನಿಗದಿ ಪಡಿಸಿ ನ್ಯಾಯಾಧೀಶ ಸಮಿವುಲ್ಲಾ ಆದೇಶ ನೀಡಿದರು. ಅಂದು ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗುತ್ತದೆ. ವಿಚಾರಣೆ ಹಿನ್ನೆಲೆಯಲ್ಲಿ ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.


