ಉಡುಪಿ : ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಚೆನ್ನೈ ಮೂಲದ ಮಾಲಾಧಾರಿಯೊಬ್ಬರಿಗೆ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ಘಟನೆ ಕೇರಳದ ನೀಲಿಮಲೆ ಬೆಟ್ಟದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಮಾನವೀಯ ಕಾರ್ಯಕ್ಕೆ ಗೋಕಾಕ್ನ ಹೋಟೆಲ್ ಉದ್ಯಮಿ ನಂದ್ರೊಳ್ಳಿ ಪ್ರಭಾಕರ್ ಶೆಟ್ಟಿ ಎಲ್ಲೆಡೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕುಂದಾಪುರ ತಾಲೂಕು ಮಾರಣಕಟ್ಟೆ ನಂದ್ರೋಳ್ಳಿ ಮೂಲದ ನಂದ್ರೊಳ್ಳಿ ಪ್ರಭಾಕರ್ ಶೆಟ್ಟಿ ಗೋಕಾಕ್ ನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಇತ್ತೀಚೆಗೆ ಶಬರಿಮಲೆ ಯಾತ್ರೆ ಕೈಗೊಂಡ ವೇಳೆ, ಶಬರಿಮಲೆಗೆ ತೆರಳುವ ಪಥದಲ್ಲಿರುವ ನೀಲಿಮಲೆ ಬೆಟ್ಟದ ಬಳಿ ಚೆನ್ನೈ ಮೂಲದ ಮಾಲಾಧಾರಿ ಅಚಾನಕ್ ಅಸ್ವಸ್ಥಗೊಂಡು ಕುಸಿದುಬಿದ್ದಾಗ, ಸ್ಥಳದಲ್ಲಿದ್ದ ಪ್ರಭಾಕರ್ ಶೆಟ್ಟಿ ತಕ್ಷಣ ಸ್ಪಂದಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಬಳಿಕ ಸಹಯಾತ್ರಿಗಳ ನೆರವಿನಿಂದ ಆತನನ್ನು ಸುರಕ್ಷಿತವಾಗಿ ಮುಂದಿನ ಚಿಕಿತ್ಸೆಗಾಗಿ ಕಳುಹಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಸಮಯೋಚಿತ ಸ್ಪಂದನೆ ಮತ್ತು ಮಾನವೀಯ ಕಾಳಜಿಯಿಂದಾಗಿ ಮಾಲಾಧಾರಿಯ ಜೀವ ಉಳಿದಿದ್ದು, ಪ್ರಭಾಕರ್ ಶೆಟ್ಟಿಯ ಈ ಕಾರ್ಯವನ್ನು ಯಾತ್ರಿಕರು ಹಾಗೂ ಸಾರ್ವಜನಿಕರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಧರ್ಮಯಾತ್ರೆಯ ನಡುವೆಯೇ ಮಾನವೀಯತೆಯ ದೀಪ ಬೆಳಗಿದ ಈ ಘಟನೆ ಹಲವರಿಗೆ ಸ್ಪೂರ್ತಿಯಾಗಿದೆ.



