ಕಾರ್ಕಳ : ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಶಿಕ್ಷಣ ತಜ್ಞ ಹಾಗೂ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಎನ್. ವಿನಯ್ ಹೆಗ್ಡೆ (86) ಅವರು ಜನವರಿ 1ರ ಮುಂಜಾನೆ ನಿಧನ ಹೊಂದಿದ್ದಾರೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಎಸ್. ಹೆಗ್ಡೆ ಅವರ ದ್ವಿತೀಯ ಪುತ್ರರಾದ ವಿನಯ್ ಹೆಗ್ಡೆ, ಕರಾವಳಿ ಭಾಗದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣರಾಗಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಅವರು, ಗ್ರಾಮೀಣ ಪ್ರದೇಶವಾಗಿದ್ದ ನಿಟ್ಟೆಯನ್ನು ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ರೂಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಶಿಕ್ಷಣದ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿಯೂ ಮಹತ್ವದ ಸಾಧನೆ ಮಾಡಿದ ವಿನಯ್ ಹೆಗ್ಡೆ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳ ಮೂಲಕವೂ ಅಪಾರ ಗೌರವ ಗಳಿಸಿದ್ದರು. ಅವರ ಸೇವೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿ–ಗೌರವಗಳು ಅವರಿಗೆ ಲಭಿಸಿದ್ದವು. ವಿನಯ್ ಹೆಗ್ಡೆ ಅವರ ನಿಧನಕ್ಕೆ ಗಣ್ಯರು, ಶಿಕ್ಷಣ ಪ್ರೇಮಿಗಳು ಹಾಗೂ ಕಾರ್ಕಳ ಸೇರಿದಂತೆ ಕರಾವಳಿ ಭಾಗದ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.



