ಉಡುಪಿ : ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರಲು ಹಾಗೂ ಜನಸಾಮಾನ್ಯರಿಗೆ ಅಧಿಕಾರಿಗಳ ಕೆಲಸಕಾಯ್ದೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿದೆ. ನಾಗರಿಕರು ಸರಕಾರಿ ಕಾರ್ಯಗಳ ಕುರಿತ ಮಾಹಿತಿ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಸ್ಪಂದಿಸಬೇಕು ಎಂದು ರಾಜ್ಯ ಮಾಹಿತಿ ಆಯುಕ್ತೆ ಮಮತಾ ಗೌಡ ಹೇಳಿದರು.

ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, 2005ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಂಡ ನಂತರ ಪ್ರತಿ ಭಾರತೀಯ ನಾಗರಿಕನಿಗೂ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯುವ ಹಕ್ಕು ದೊರಕಿದೆ. ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಅಧಿಕಾರಿಗಳು ಸಕಾಲದಲ್ಲಿ ಶುಲ್ಕದೊಂದಿಗೆ ದಾಖಲಿಸಿ, ನಿಯಮಾನುಸಾರ ದಾಖಲೆಗಳನ್ನು ನೀಡಬೇಕು. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮಾಹಿತಿಯ ಪಾಲಕರಾಗಿದ್ದು, ಅಲ್ಪ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಬಾರದು. ಸಾರ್ವಜನಿಕ ಹಿತಾಸಕ್ತಿ ಇರುವ ಎಲ್ಲ ದಾಖಲೆಗಳು, ಡಿಜಿಟಲ್ ಮಾಹಿತಿಗಳು, ಚಿತ್ರಗಳು ಮುಂತಾದವುಗಳನ್ನು ನೇರವಾಗಿ ಹಂಚಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಅಧಿಕಾರಿಗಳಲ್ಲಿ ಇನ್ನೂ ಕೆಲವು ಗೊಂದಲಗಳಿವೆ. ಕಾಯ್ದೆಯಲ್ಲಿ ಕಾಲಕಾಲಕ್ಕೆ ತಿದ್ದುಪಡಿ ಆಗುತ್ತಿದ್ದು, ಅದರ ಜ್ಞಾನ ಅಧಿಕಾರಿಗಳಿಗೆ ಅಗತ್ಯ. ಇಂತಹ ಕಾರ್ಯಾಗಾರಗಳ ಮೂಲಕ ಎಲ್ಲರೂ ಮಾಹಿತಿ ಹಕ್ಕಿನ ಕುರಿತು ಅರಿವು ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಉಪಸ್ಥಿತರಿದ್ದರು.



