Friday, April 17, 2026

spot_img

ನಾಗರಮಠ ಮರಳುಗಾರಿಕೆ,ಸ್ಥಳೀಯರಿಂದ ತೊಂದರೆ : ಗುತ್ತಿಗೆದಾರ ಕುಶಕುಮಾರ್ ಆರೋಪ

ಉಡುಪಿ : ಬ್ರಹ್ಮಾವರ ತಾಲೂಕಿನ ಹೊಸಾಳ ಸಮೀಪದ ನಾಗರಮಠದಲ್ಲಿ ಅಧಿಕೃತವಾಗಿ ಮರಳುಗಾರಿಕೆ ನಡೆಸಲು ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದರೂ, ಕೆಲವು ಸ್ಥಳೀಯ ಸ್ವಹಿತಾಸಕ್ತಿ ಗುಂಪುಗಳಿಂದ ಕಳೆದ ಮೂರು ತಿಂಗಳಿನಿಂದ ನಿರಂತರ ತೊಂದರೆ ನೀಡಲಾಗುತ್ತಿದೆ ಎಂದು ಗುತ್ತಿಗೆದಾರ ಬಿ. ಕುಶಕುಮಾರ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಡಿ.ಎಸ್.ಬಿ-5 ಮರಳು ಬ್ಲಾಕ್‌ಗೆ ಟೆಂಡರ್ ಮೂಲಕ ಅನುಮತಿ ಪಡೆದಿರುವುದಾಗಿ ತಿಳಿಸಿದರು. ಆದರೆ ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿದ್ದ ಕೆಲವರು ಹಣಕ್ಕಾಗಿ ಒತ್ತಡ ಹೇರುವುದರ ಜೊತೆಗೆ ಸುಳ್ಳು ಮಾಹಿತಿಯನ್ನು ಹರಡಿ ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ದೂರಿದರು.

ಮರಳುಗಾರಿಕೆಯಿಂದ ಕೃಷಿಭೂಮಿಗೆ ಹಾನಿ, ನದಿ ಕೊರೆತವಾಗುತ್ತದೆ ಎಂಬ ಆರೋಪಗಳು ಆಧಾರರಹಿತ. ಜಿಲ್ಲಾಡಳಿತವು ಸೂಕ್ತ ಸರ್ವೆ ನಡೆಸಿದ ಬಳಿಕವೇ ನಮಗೆ ಪರವಾನಗಿ ನೀಡಿದೆ. ಇ-ಪ್ರೊಕ್ಯೂರ್‌ಮೆಂಟ್ ಪ್ರಕ್ರಿಯೆಯ ಮೂಲಕ ಟೆಂಡರ್ ನಡೆದಿದ್ದು, ತಪ್ಪು ಸರ್ವೆ ಸಂಖ್ಯೆ ನೀಡಲಾಗಿದೆ ಎಂಬ ಆರೋಪಕ್ಕೂ ಯಾವುದೇ ಆಧಾರ ಇಲ್ಲ ಎಂದು ಸ್ಪಷ್ಟಪಡಿಸಿದರು.

ನದಿಯಲ್ಲಿ ಮರಳು ದಿಬ್ಬ ಹೆಚ್ಚಾಗಿ ನೀರಿನ ಹರಿವು ತಡೆಗೊಳ್ಳುತ್ತಿದ್ದು, ತೆಕ್ಕಟ್ಟೆ, ಚಿತ್ರಪಾಡಿ, ಬನ್ನಾಡಿ, ಗಿಳಿಯಾರ, ನಾಗರಮಠ ಪ್ರದೇಶದ ಕೃಷಿಭೂಮಿಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದಿಬ್ಬ ತೆರವುಗೊಳಿಸಲು ಸರ್ಕಾರ ಟೆಂಡರ್ ನೀಡಿದ್ದು, ಕಾನೂನುಬದ್ಧವಾಗಿ ಗುತ್ತಿಗೆ ಪಡೆದುಕೊಂಡಿದ್ದರೂ ಸ್ಥಳೀಯರಿಂದ ಅಡ್ಡಿಪಡಿಸಲಾಗುತ್ತಿದೆ ಎಂದರು.ಇದೇ ವಿಚಾರದಲ್ಲಿ ಹಿಂದೆ ಸಲ್ಲಿಸಲಾದ ದೂರುಗಳನ್ನು ಹಸಿರು ನ್ಯಾಯಪೀಠ ವಜಾಗೊಳಿಸಿದ್ದು, ಹೈಕೋರ್ಟ್ ಕೂಡ ಯಾವುದೇ ತಡೆ ನೀಡಿಲ್ಲ ಎಂದು ಅವರು ತಿಳಿಸಿದರು. ಮರಳುಗಾರಿಕೆಯಿಂದ ಜಮೀನು ಹಾನಿಯಾಗುತ್ತದೆ ಎನ್ನುವವರು ಸೂಕ್ತ ದಾಖಲೆ ಸಲ್ಲಿಸಿಲ್ಲ. ವೈಯಕ್ತಿಕ ದ್ವೇಷದಿಂದ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆ ನಡೆಸುತ್ತಿರುವ ಕೆಲವರು ರಾತ್ರಿಯ ವೇಳೆ ಅನಧಿಕೃತವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿದರು. ಸ್ಥಳೀಯರ ಅಡ್ಡಿಪಡಿಸುವಿಕೆ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಮರಳು ತೆಗೆಯುವ ಪರಿಸ್ಥಿತಿ ಎದುರಾಗಿದೆ. ವಾಹನಗಳನ್ನು ಅಡ್ಡಗಟ್ಟಿ ಚಾಲಕರ ಮೇಲೆ ದಾಳಿ ಮಾಡಲು ಯತ್ನಿಸಿರುವ ಘಟನೆಗಳೂ ನಡೆದಿವೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅನಧಿಕೃತ ಮರಳುಗಾರಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಅನಿಲ್ ಕುಮಾರ್ ಶೆಟ್ಟಿ, ಪ್ರವೀಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles