ಉಡುಪಿ: ನವೋದಯ ಫ್ರೆಂಡ್ಸ್, ಹರ್ತಟ್ಟು (ರಿ.) ಗಿಳಿಯಾರು ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುಮಾರು ರೂ 50 ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆ.15ರಂದು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮೂರು ದಶಕಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆ, ಸದಸ್ಯರ ಸ್ವಂತ ಸಂಪನ್ಮೂಲದಿಂದ ಬಸ್ ನಿಲ್ದಾಣ ನಿರ್ಮಿಸಿರುವುದು ಸಾರ್ವಜನಿಕ ಸೇವೆಯ ಉತ್ತಮ ಮಾದರಿ ಎಂದರು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಸ್ಥಳದಲ್ಲಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಹರ್ತಟ್ಟುವನ್ನು ಹಸಿರು ಗ್ರಾಮವನ್ನಾಗಿಸುವ ಉದ್ದೇಶದಿಂದ ಹಸಿರು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮಹಿಳಾ ಸದಸ್ಯರಿಗೆ 150 ಸಸಿಗಳನ್ನು ವಿತರಿಸಿ, ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸುವಂತೆ ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ಉದ್ಯಮಿ ಶ್ಯಾಮಸುಂದರ್ ಭಂಡಾರಿ, ಹರ್ತಟ್ಟು ಅಜ್ಜಯ್ಯ ಪರಿವಾರ ದೇವಸ್ಥಾನದ ಅಧ್ಯಕ್ಷ ವಾಸುದೇವ್ ಮಯ್ಯ, ಕಲ್ಲೆಟ್ಟು ಶ್ರೀ ಮಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತಿಮ್ಮಕಾಂಚನ್, ಚಂದ್ರ ಹರ್ತಟ್ಟು ಸೇರಿದಂತೆ ಗ್ರಾಮಸ್ಥರು ಹಾಗೂ ನವೋದಯ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು. ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಾಣ ಹಾಗೂ ಪರಿಸರ ಸಂರಕ್ಷಣೆಯ ಹಸಿರು ಅಭಿಯಾನ ಕೈಗೊಂಡಿರುವ ನವೋದಯ ಫ್ರೆಂಡ್ಸ್ನ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಯಿತು.



