ಕುಂದಾಪುರ: ಧರ್ಮಸ್ಥಳದ ಸಿರಿ ಗ್ರಾಮೊದ್ಯೋಗ ಸಂಸ್ಥೆಯ ಕುಂದಾಪುರ ಶಾಖೆ ಯಲ್ಲಿ ಹೋಂ ಪ್ರಾಡೆಕ್ಟ ಡಿಸ್ಟಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರು ಧಿಡೀರ್ ನಾಪತ್ತೆಯಾದ ಘಟನೆ ನಡೆದಿದೆ. ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ನಿವಾಸಿ ಗಣಪತಿ ನಾಯಕ್ (57) ನಾಪತ್ತೆಯಾದವರು. ಇದೇ ಶುಕ್ರವಾದರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಸ್ಕೂಟರ್ ಹಿಡಿದು ತೆರಳಿದ್ದ ಗಣಪತಿ ನಾಯಕ್ ಸಂಜೆ ಆದರೂ ಮನೆಗೆ ಬಾರದಿದ್ದನ್ನು ನೋಡಿ ಹುಡುಕಾಟ ನಡೆಸಲಾಗಿತ್ತು.

ಶನಿವಾರ ಬೆಳಿಗ್ಗೆ ಅವರ ಸ್ಕೂಟರ್ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನಿಲ್ಲಿಸಿದ್ದು ಪತ್ತೆಯಾಗಿತ್ತು. ಶನಿವಾರ ಬೆಳಗ್ಗಿನ ಜಾವ ಸ್ಥಳೀಯರು ಸ್ಕೂಟರ್ ಅಲ್ಲಿ ನಿಂತಿರುವುದನ್ನು ಗಮನಿಸಿದ್ದರು, ಆದರೆ ಗಣಪತಿ ನಾಯಕ್ ಮಾತ್ರ ಪತ್ತೆಯಾಗಿಲ್ಲ. ಯಾರೊಂದಿಗೂ ಅಗತ್ಯಕ್ಕಿಂತ ಹೆಚ್ಚಿನ ಮಾತುಕತೆಯಾಡದೆ ತನ್ನಷ್ಟೆ ತಾನು ಕೆಲಸ ಮಾಡಿಕೊಂಡಿದ್ದ ಗಣಪತಿ ನಾಯಕ್, ತಮ್ಮ ಉದ್ಯಮಕ್ಕಾಗಿ ಪೈನಾನ್ಸ್ ಒಂದರಲ್ಲಿ ಸಾಲ ಮಾಡಿ ಪಿಕ್ ಅಪ್ ವಾಹನವೊಂದನ್ನು ಖರೀದಿಸಿದ್ದರು. ಮನೆಯಲ್ಲೂ ಪತ್ನಿ ಮತ್ತು ಮಕ್ಕಳೊಂದಿಗೆ ಸುಂದರ ಸಂಸಾರ ನಡೆಸಿಕೊಂಡಿದ್ದ ಗಣಪತಿ ನಾಯಕ್ ಅಚಾನಕ್ ಆಗಿ ಕಾಣೆಯಾಗಿರುವುದು ಮನೆಯರನ್ನು ಕಂಗೆಡಿಸಿದೆ. ಉದ್ಯಮಕ್ಕೆ ಮಾಡಿದ ಸಾಲ ಹೊರತುಪಡಿಸಿ ಮತ್ತೆ ಯಾವುದೇ ಸಮಸ್ಯೆ ಇಲ್ಲದೆ ಜೀವನ ನಡೆಸಿಕೊಂಡ ವ್ಯಕ್ತಿ ಕಾಣೆಯಾಗಿರುವುದು ಮನೆಯವರ ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.