ಉಡುಪಿ: ಮಣಿಪಾಲ ದಶರಥ ನಗರದಲ್ಲಿ ಹುಚ್ಚು ಹಿಡಿದ ನಾಯಿಯ ಧಾಳಿಯಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಇಂದು ಬೆಳಿಗ್ಗೆ ಪಟಾಕಿ ತರಲೆಂದು ಹೊರಟಿದ್ದ ಸ್ಥಳೀಯ ನಿವಾಸಿ ಸುರೇಶ್ ಅವರ ಪುತ್ರ ಸತೀಶ್ (7ನೇ ತರಗತಿ) ಮೇಲೆ ನಾಯಿ ಧಾಳಿ ನಡೆಸಿದೆ ಎನ್ನಲಾಗಿದೆ. ಗಾಯಗೊಂಡ ಬಾಲಕನನ್ನು ತಕ್ಷಣವೇ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆಗಾಗಿ ದಾಖಲಿಸಿ, ಚುಚ್ಚುಮದ್ದು ನೀಡಲಾಗಿದೆ ಎಂದು ತಂದೆ ಸುರೇಶ್ ತಿಳಿಸಿದ್ದಾರೆ.

ದಾಳಿಗೆ ಕಾರಣವಾದ ನಾಯಿ ಕಪ್ಪು ಬಣ್ಣದಿದ್ದು, ಜೊಲ್ಲು ಸುರಿಸುತ್ತಾ ಅಲೆದಾಡುತ್ತಿತ್ತು ಹಾಗೂ ಅದರ ಕುತ್ತಿಗೆಯಲ್ಲಿ ಬೆಲ್ಟ್ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಹುಚ್ಚು ನಾಯಿಯ ಭೀತಿ ದಶರಥ ನಗರದಲ್ಲಿ ಹೆಚ್ಚಿದ್ದು, ನಿವಾಸಿಗಳು ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ