Saturday, August 15, 2026

spot_img

ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಉಡುಪಿ: ಕಾಪು ತಾಲೂಕಿನ ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್‌ ಕಾಂಪ್ಲೆಕ್ಸ್‌ನಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ, ಕೊಲೆಗೆ ಹಣಕಾಸು ನೆರವು ನೀಡಿದ ಹಾಗೂ ಅಪರಾಧಿಕ ಒಳಸಂಚಿನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಮೋಟಾರ್‌ಸೈಕಲ್‌ನಲ್ಲಿ ಬಂದಿದ್ದ ಆರೋಪಿಗಳ ಪೈಕಿ ಸಹಸವಾರನು ಪಿಸ್ತೂಲ್‌ನಿಂದ ಡೇವಿಡ್ ಡಿಸೋಜಾ ಅವರ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಪ್ರಕರಣದಲ್ಲಿ ಈಗಾಗಲೇ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ವಾಜುಲ್ ಶೇಖ್ ಅಲಿಯಾಸ್ ದೀಪಕ್ ಅವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆರೋಪಿಗಳ ಬ್ಯಾಂಕ್ ಖಾತೆಗಳ ಪರಿಶೀಲನೆ ವೇಳೆ ಮೊಹಮ್ಮದ್ ಇರ್ಷಾದ್ ಹಾಗೂ ಚಿರಾಗ್ ಪೂಜಾರಿ ಅವರು ಆರೋಪಿಗಳಿಗೆ ಹಣ ಜಮಾ ಮಾಡಿ ಕೃತ್ಯಕ್ಕೆ ಸಹಕರಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿತ್ತು. ಮುಂದುವರಿದ ತನಿಖೆಯಲ್ಲಿ ಆರೋಪಿಗಳ ಬ್ಯಾಂಕ್ ಖಾತೆ, ಮೊಬೈಲ್ ಹಾಗೂ ಕರೆ ವಿವರಗಳನ್ನು ವಿಶ್ಲೇಷಿಸುವುದರ ಜೊತೆಗೆ ಅವರ ಚಲನವಲನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಕೊಲೆಗೆ ಅಪರಾಧಿಕ ಒಳಸಂಚು ರೂಪಿಸಿ ಕೃತ್ಯಕ್ಕೆ ಹಣಕಾಸು ಪೂರೈಸಿದ ಆರೋಪಿಗಳ ಕುರಿತು ಪೊಲೀಸರಿಗೆ ಮಹತ್ವದ ಸುಳಿವು ದೊರೆತಿದೆ.

ಈ ಹಿನ್ನೆಲೆಯಲ್ಲಿ ಸದಾನಂದ ದೇವಾಡಿಗ ಅಲಿಯಾಸ್ ಸದಾನಂದ ಎ. (41), ಅದಮಾರು ಮಠದ ಬಳಿ, ಬಡಾ ಎರ್ಮಾಳ್ ಗ್ರಾಮ ಹಾಗೂ ಕಿಶೋರ್ ರಾಮ ಪೂಜಾರಿ (47), ಮಹಾಲಕ್ಷ್ಮೀ ದೇವಸ್ಥಾನದ ಬಳಿ, ಉಚ್ಚಿಲ ಬಡಾ ಗ್ರಾಮ, ಕಾಪು ತಾಲೂಕು ಇವರನ್ನು ಬಂಧಿಸಲಾಗಿದೆ. ಸದಾನಂದ ದೇವಾಡಿಗನಿಂದ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಎರಡು ಮೊಬೈಲ್ ಫೋನ್‌ಗಳು, ಒಂದು ಮೋಟಾರ್‌ಸೈಕಲ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಕಿಶೋರ್ ರಾಮ ಪೂಜಾರಿಯಿಂದ ಮೂರು ಮೊಬೈಲ್ ಫೋನ್‌ಗಳು ಹಾಗೂ ಒಂದು ಕ್ರೇಟಾ ಕಾರು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿ ರಾಜು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರ ಮೇಲೆ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಗಾಯಗೊಂಡಿದ್ದು, ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ರಾಜುವನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಕೊಲೆಯ ಹಿಂದಿರುವ ಸಂಪೂರ್ಣ ಜಾಲ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles