ಕೋಟ : ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟೋದ್ಧಾರದ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕಳೆದ ಐವತ್ತು ವರ್ಷಗಳಿಂದ ಡಿವೈನ್ ಪಾರ್ಕ್ ಮೂಲಕ ಸೇವೆ ಸಲ್ಲಿಸುತ್ತಿದ್ದ ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಡಾ. ಎ. ಚಂದ್ರಶೇಖರ್ ಉಡುಪ (75) ಜ.7ರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.

ವೃತ್ತಿಯಿಂದ ವೈದ್ಯರಾಗಿದ್ದ ಅವರು, ಎಪ್ಪತ್ತರ ದಶಕದಲ್ಲಿ ವಿವೇಕಾನಂದರ ಚಿಂತನೆಗಳಿಂದ ಪ್ರೇರಿತರಾಗಿ ಡಿವೈನ್ ಪಾರ್ಕ್ ಸಂಸ್ಥೆಯನ್ನು ಸ್ಥಾಪಿಸಿ ಆರೋಗ್ಯ, ಯೋಗ, ಪ್ರಕೃತಿ ಚಿಕಿತ್ಸಾ, ಆಯುರ್ವೇದ ಹಾಗೂ ಆಧ್ಯಾತ್ಮಿಕ ಚಿಕಿತ್ಸೆಯ ಮೂಲಕ ಸಮಾಜಸೇವೆಗೆ ತಮ್ಮನ್ನು ಅರ್ಪಿಸಿದ್ದರು.

ಡಿವೈನ್ ಪಾರ್ಕ್ನ ಸಹ ಸಂಸ್ಥೆಯಾಗಿ ಎಸ್ಎಚ್ಆರ್ಎಫ್ (ಯೋಗಬನ) ಸ್ಥಾಪಿಸಿದ ಅವರು, ದೇಶ–ವಿದೇಶಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದರು. ಎಲ್ಲರಿಗೂ ಅವರು ಡಾಕ್ಟರ್ಜಿ ಎಂದೇ ಪರಿಚಿತರಾಗಿದ್ದರು.

ಮೃತರು ಪುತ್ರ ಡಾ. ವಿವೇಕ ಉಡುಪ, ಪತ್ನಿ, ಸೊಸೆ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇಂದು ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ ಡಿವೈನ್ ಪಾರ್ಕ್ನ ಜ್ಞಾನ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಂತರ ಅಂತಿಮ ವಿಧಿವಿಧಾನಗಳು ನೆರವೇರಲಿವೆ ಎಂದು ಡಿವೈನ್ ಪಾರ್ಕ್ ಪ್ರಕಟಣೆ ತಿಳಿಸಿದೆ.



