ಉಡುಪಿ : ಹೆಜಮಾಡಿ–ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ದಾರುಣ ರಸ್ತೆ ಅಪಘಾತದಲ್ಲಿ ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಏಳು ಜನರು ಗಾಯಗೊಂಡಿದ್ದಾರೆ. ಮೃತರನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ.

ಮುಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ, ಪರಿಕರಗಳು ಹಾಗೂ ಕೆಲಸಕ್ಕೆ ತೆರಳುತ್ತಿದ್ದ ಪುರುಷ–ಮಹಿಳಾ ಕಾರ್ಮಿಕರು ಇದ್ದರು. ವಾಹನ ವೇಗವಾಗಿ ಸಾಗುತ್ತಿದ್ದ ವೇಳೆ ಟಯರ್ ಏಕಾಏಕಿ ಸ್ಫೋಟಗೊಂಡಿದ್ದು, ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಟೆಂಪೋ ರಸ್ತೆ ಬದಿಗೆ ಮಗುಚಿಬಿದ್ದಿದೆ. ಟೆಂಪೋ ಮಗುಚಿಬಿದ್ದಾಗ ಹಲವರು ವಾಹನದ ಅಡಿಯಲ್ಲಿ ಸಿಲುಕಿದ್ದರು.

ಸ್ಥಳೀಯರು ಮತ್ತು ಟೋಲ್ ಪ್ಲಾಜಾ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ, ಸಿಲುಕಿದ್ದವರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಜಮಾಡಿ ಟೋಲ್ನ ಅಂಬುಲೆನ್ಸ್ ಮತ್ತು ಕ್ರೇನ್ ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣೆಯಲ್ಲಿ ಕೈಜೋಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪಾರ್ವತಿಯನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ ಮಹಂತೇಶ್, ಸಾವಿತ್ರಮ್ಮ ಸೇರಿ ಏಳು ಮಂದಿ ಇದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ.



