ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಘಟಕವು ಕಳೆದ ಹದಿಮೂರು ವರ್ಷಗಳಿಂದ
ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ಐದು ದಿನಗಳ ಸನಿವಾಸ ಶಿಬಿರವನ್ನು ನಡೆಸುತ್ತಾ ಬಂದಿದ್ದು, ಈ ವರ್ಷದ ಶಿಬಿರವು ಫೆಬ್ರವರಿ 27 ರಿಂದ ಮಾರ್ಚ್ 03, 2025ರ ವರೆಗೆ
ಯಕ್ಷಗಾನ ಕಲಾರಂಗದ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ. ಫೆಬ್ರವರಿ 27ರಂದು ಪೂರ್ವಾಹ್ನ 11.30 ಗಂಟೆಗೆ ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳರು ಶಿಬಿರ ಉದ್ಘಾಟಿಸಲಿದ್ದಾರೆ. ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾರಂಭದಲ್ಲಿ ಡಾ. ಸುಧಾಕರ ಶೆಟ್ಟಿ, ಶ್ರೀನಿವಾಸ ಪ್ರಭು, ದಿನೇಶ್ ಪುತ್ರನ್, ರಮೇಶ್ ಕಾಂಚನ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ಪ್ರೊಟೊ ಅಪ್ ಸ್ಕಿಲ್‌ನ ಗುರುದತ್ತ ಬಂಟ್ವಾಳಕರ್ ನಿರ್ದೇಶನದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ಶಿಬಿರವನ್ನು ನಡೆಸಿಕೊಡಲಿದೆ. ಶಿಬಿರದಲ್ಲಿ ಆಂಗ್ಲ ಭಾಷಾ ಕೌಶಲ, ಸಂವಹನ ಕೌಶಲ, ನಾಯಕತ್ವ ತರಬೇತಿ, ವೃತ್ತಿ ಮಾರ್ಗದರ್ಶನ, ಸಮೂಹ ಸಹಭಾಗಿತ್ವ, ಸಮಾಜಮುಖಿ ಚಿಂತನೆ, ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದ ಕುರಿತು ತರಬೇತಿ ನೀಡಲಾಗುವುದು. ಇದೇ ಸಂದರ್ಭದಲ್ಲಿ ಸಾಧಕ ವ್ಯಕ್ತಿಗಳೊಂದಿಗೆ ಸಂವಾದ ಏರ್ಪಡಿಸಿ ಶಿಬಿರಾರ್ಥಿಗಳಿಗೆ ಪರಿಚಯಿಸಲಾಗುವುದು. ಸುಮಾರು 250 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.