ಉಡುಪಿ : ಜಾಗದ ತಕರಾರಿನಿಂದ ಇಬ್ಬರು ಯುವಕರು ಪರಸ್ಪರ ಹಲ್ಲೆ ಮಾಡಿಕೊಂಡು ಚೂರಿ ಇರಿತ ನಡೆದ ಘಟನೆ ಹಿರಿಯಡಕ ಸಮೀಪದ ಪುತ್ತಿಗೆ ಗ್ರಾಮದಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ಸ್ಥಳೀಯ ಯುವಕರಾದ ಶಾರೀಕ್ ಮತ್ತು ತಮೀಮ್ ನಡುವೆ ವಾಗ್ವಾದ ಉಂಟಾಗಿ, ನಂತರ ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ತಮೀಮ್ ಶಾರೀಕ್ನ ಬೆನ್ನಿಗೆ ಮೂರು ಬಾರಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ಶಾರೀಕ್ನ ತಂದೆ ಮಹಮ್ಮದ್ ರಫೀಕ್ ಹಿರಿಯಡಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಫೀಕ್ ಅವರ ಹೇಳಿಕೆಯ ಪ್ರಕಾರ, ಅವರು ಪುತ್ತಿಗೆಯಲ್ಲಿ ತಮ್ಮ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿ ಪ್ರಸ್ತುತ ಆವರಣ ಗೋಡೆ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ಹುಸೇನ್ ಮತ್ತು ಅವರ ಮಗ ತಮೀಮ್ ಅಕ್ರಮವಾಗಿ ಸ್ಥಳ ಪ್ರವೇಶಿಸಿ ಗೋಡೆ ಕಟ್ಟಬಾರದು” ಎಂದು ಜೀವ ಬೆದರಿಕೆ ಹಾಕಿದರೆಂದು ಆರೋಪಿಸಲಾಗಿದೆ. ಆದರೆ ಪ್ರತಿದೂರು ಸಲ್ಲಿಸಿದ ಹುಸೇನ್ ಅವರ ವಾದ ಪ್ರಕಾರ, ಸರ್ವೇ ವೇಳೆ ಜಾಗವು ತಮ್ಮದಾಗಿರುವುದಾಗಿ ದಾಖಲೆಗಳಲ್ಲಿ ತೋರಿದ ಕಾರಣ ಗೋಡೆ ನಿರ್ಮಾಣಕ್ಕೆ ವಿರೋಧಿಸಿದ್ದರು. ನಾವು ವಿರೋಧಿಸಿದಾಗ ರಫೀಕ್ ಹಾಗೂ ಪುತ್ರ ಶಾರೀಕ್ ಸರಳಿಯಿಂದ ನಮ್ಮ ಮೇಲೆ ಹಲ್ಲೆ ನಡೆಸಿ ತಲೆ ಹಾಗೂ ಕೈಗೆ ಗಂಭೀರ ಗಾಯ ಮಾಡಿದ್ದಾರೆ ಎಂದು ದೂರಿದ್ದಾರೆ. ಘಟನೆಯ ನಂತರ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.



