ಉಡುಪಿ: ಜನಸಾಮಾನ್ಯರು ಸರಕಾರದ ಮೇಲೆ ನಿರೀಕ್ಷೆ ಇಟ್ಟುಕೊಂಡು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಬರುತ್ತಾರೆ. ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದರೊಂದಿಗೆ ನಿಯಮಾನುಸಾರ ಸಹಾನುಭೂತಿಯಿಂದ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳಕರ್ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಹಾಗೂ ಪೂರ್ವ ಮುಂಗಾರು ಮಳೆಯು ಯಥೇಚ್ಛವಾಗಿ ಬಂದಿದ್ದು, ಅಲ್ಪಪ್ರಮಾಣದ ಪ್ರವಾಹಗಳು ಉಂಟಾಗಿವೆ. ಮುಂಬರುವ ಮುಂಗಾರು ಮಳೆಯು ಹೆಚ್ಚಾಗಿ ಬರಬಹುದೆಂಬ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರವಾಹ ಸಂದರ್ಭದಲ್ಲಿ ಹೆಚ್ಚಿನ ಮಾನವ ಹಾಗೂ ಜಾನುವಾರುಗಳ ಪ್ರಾಣಹಾನಿ ಮತ್ತು ಆಸ್ತಿಗಳಿಗೆ ಹಾನಿಯಾಗದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೈಗೊಳ್ಳಬೇಕು ಎಂದರು. ವಾರಾಹಿ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳಲು ಐದು ವರ್ಷಗಳ ಹಿಂದೆ ರೈತರ ಜಮೀನುಗಳನ್ನು ಭೂಸ್ವಾಧೀನ ಕೈಗೊಂಡಿದ್ದು, ಅವರ ಸ್ವತ್ತುಗಳನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಅವರಿಗೆ ಭೂ ಪರಿಹಾರದ ಹಣವನ್ನು ನೀಡಿಲ್ಲ. ಇದರಿಂದಾಗಿ ರೈತರು ತಮ್ಮ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಮುಂದಿನ ಸಭೆಯ ಒಳಗಾಗಿ ರೈತರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದ ಅವರು, ಈ ಕಾಮಗಾರಿಗೆ ಅಗತ್ಯವಿರುವ ಭೂಮಿಯು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಇವೆ. ಇವುಗಳ ಕ್ಲಿಯರೆನ್ಸ್ ಅನ್ನು ಅರಣ್ಯ ಇಲಾಖೆಯವರು ಮಾಡಬೇಕು ಎಂದರು.

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸಮುದ್ರದ ಏರಿಳಿತದಿಂದಾಗಿ ಕಡಲಕೊರೆತ ಉಂಟಾಗುತ್ತಿದೆ. ಈಗಾಗಲೆ ಸರಕಾರ 5 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೆಜಮಾಡಿಯಿಂದ ಶಿರೂರಿನ ವರೆಗೆ ಕಡಲಕೊರೆತ ಸಂಭವವಿರುವ ಪ್ರದೇಶಗಳನ್ನು ಗುರುತಿಸಿ, ಶಾಶ್ವತ ಕಾಮಗಾರಿ ಕೈಗೊಳ್ಳಲು 60 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಇದನ್ನು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ ಪ್ರಾಕೃತಿಕ ಸೊಬಗು ಹಾಗೂ ಧಾರ್ಮಿಕ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಪ್ರವಾಸಿ ತಾಣಗಳಿಗೆ ಇನ್ನೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಗಳು ಆಗಬೇಕು. ಅವರುಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಪ್ರವಾಸೋದ್ಯಮವನ್ನು ಇನ್ನಷ್ಟು ಹೆಚ್ಚಿಸಬೇಕು. ಸಾಧ್ಯವಾದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದ ಅವರು, ಅನಧಿಕೃತ ಹೋಂಸ್ಟೇಗಳಿಗೆ ಕಡಿವಾಣ ಹಾಕಬೇಕು. ಪ್ರವಾಸಿ ಚಟುವಟಿಕೆ ಕಾರ್ಯಗಳಲ್ಲಿ 18 ವರ್ಷದೊಳಗಿನ ಮಕ್ಕ÷ಳನ್ನು ನೇಮಿಸಿಕೊಳ್ಳದಂತೆ ಕ್ರಮವಹಿಸಬೇಕು ಎಂದರು.

ಶಾಸಕ ಯಶ್‌ಪಾಲ್ ಎ ಸುವರ್ಣ ಮಾತನಾಡಿ, ರಾಜ್ಯದಲ್ಲಿ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಚಟುವಟಿಕೆಗಳು ಹೆಚ್ಚು ನಡೆಯುತ್ತಿವೆ. ಆದರೆ, ವಸತಿ ಯೋಜನೆಯಲ್ಲಿ ಬರೀ 25 ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ. ಇತರ ಜಿಲ್ಲೆಗಳಿಗೂ 25 ಮನೆಗಳನ್ನು ನೀಡಲಾಗುತ್ತಿದೆ. ಇವುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದರು. ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗ್ರಾಮ ಪಂಚಾಯತ್‌ನಲ್ಲಿ ವಿತರಿಸುತ್ತಿದ್ದ 9/11 ಅನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯಾಯೋಜಿಸಿದ ನಂತರ ಏಕ ವಿನ್ಯಾಸ ನಕ್ಷೆಯ ಸಮಸ್ಯೆಗಳ ಬಗ್ಗೆ ದೂರುಗಳು ಬರುತ್ತಿದ್ದು, ಇದರಿಂದಾಗಿ ಗೃಹ ನಿರ್ಮಾಣ ಮತ್ತು ಕಟ್ಟಡಗಳನ್ನು ಕಟ್ಟಲು ತೊಂದರೆಯಾಗುತ್ತಿದೆ. ಇದನ್ನು ಬಗೆಹರಿಸಬೇಕು ಎಂದು ಸಭೆಯ ಗಮನಕ್ಕೆ ತಂದರು. ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳು, ರಸ್ತೆಗೆ ಆವರಿಸಿದ್ದು, ಇದರಿಂದ ಸಾರ್ವಜನಿಕರು ಓಡಾಡಲು ಅನಾನುಕೂಲವಾಗಿದೆ ಹಾಗೂ ಕಾಡುಪ್ರಾಣಿಗಳ ಹಾವಳಿಗಳೂ ಸಹ ಆಗಿವೆ. ಕಳೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರೂ ಸಹ ಕ್ರಮವಾಗಿಲ್ಲ. ಎಂಬ ಮನವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ವಾರದ ಒಳಗಾಗಿ ಇವುಗಳ ತೆರವು ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರ ಡಾ. ಧನಂಜಯ ಸರ್ಜಿ ಹಾಗೂ ಕಿಶೋರ್ ಕುಮಾರ್ ಪುತ್ತೂರು, ಶಾಸಕರುಗಳಾದ ವಿ. ಸುನೀಲ್ ಕುಮಾರ್ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ ಶಂಕರ, ಡಿಎಫ್‌ಓ ಗಣಪತಿ, ವೈಲ್ಡ್ಲೈಫ್ ಡಿಎಫ್‌ಓ ಶಿವರಾಮ ಎಂ.ಬಾಬು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು, ಕೆ.ಡಿ.ಪಿ ಸದಸ್ಯರುಗಳು, ಜಿಲ್ಲಾ ಮಟ್ಟದ ಅನುಷ್ಟಾನಾಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಾರ್ವಜನಿಕರು ಗೃಹ ನಿರ್ಮಾಣ ಕೈಗೊಳ್ಳಲು ಅಗತ್ಯವಿರುವ ಮರಳು, ಕಲ್ಲು, ಕೆಂಪುಇಟ್ಟಿಗೆ ಸೂಕ್ತ ಬೆಲೆಗೆ ಸಿಗುವಂತೆ ಕ್ರಮವಹಿಸಬೇಕು ಎಂದ ಅವರು, ಅನಧಿಕೃತವಾಗಿ ಮರಳು ಗಣಿಗಾರಿಕೆ, ಸಾಗಾಣಿಕೆ, ಮಾರಾಟಕ್ಕೆ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಬೇಕು. ಕೆಂಪುಕಲ್ಲಿ ಗಣಿಗಾರಿಕೆಗೆ ಗಣಿ ಇಲಾಖೆಯಿಂದ ಪರವಾನಿಗೆ ಲಭಿಸಿದ್ದರೂ ಅರಣ್ಯ ಇಲಾಖೆಯವರ ಹಸ್ತಕ್ಷೇಪದಿಂದ ಕೈಗೊಳ್ಳಲು ಆಗುತ್ತಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಇವು ನಿಯಮಾನುಸಾರ ಮಾಡಲು ಅನುಮತಿ ನೀಡಬೇಕು
ಲಕ್ಷ್ಮೀ ಹೆಬ್ಬಾಳ್ಕರ್ (ಉಸ್ತುವಾರಿ ಸಚಿವರು)