ಉಡುಪಿ : ಕಸ್ತೂರಿರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭೌತಿಕ ಸಮೀಕ್ಷೆ ನಡೆಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಅವರು ಹೆಬ್ರಿಯಲ್ಲಿ ಶುಕ್ರವಾರ ಕಸ್ತೂರಿರಂಗನ್ ವರದಿ ಸಾಧಕ–ಬಾಧಕಗಳ ಕುರಿತು ಸ್ಥಳೀಯ ಜನರು, ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ನಡೆದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು. ಕಸ್ತೂರಿರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದಿಂದಾಗುತ್ತಿರುವ ಸಮಸ್ಯೆಗಳನ್ನು ಜನರು ನನ್ನ ಗಮನಕ್ಕೆ ತಂದಿದ್ದಾರೆ. ಜನರ ಭಾವನೆ ತಿಳಿದು, ಅವರ ಅಭಿಪ್ರಾಯ ಆಲಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ನಿಮ್ಮ ಅಭಿಪ್ರಾಯವೇ ಸರ್ಕಾರದ ಅಭಿಪ್ರಾಯವಾಗಬೇಕು ಎಂದು ಸಿಎಂ ಹೇಳಿದರು.

ಕಸ್ತೂರಿರಂಗನ್ ವರದಿ ಕುರಿತು ಕೇರಳ ಮಾದರಿಯಲ್ಲಿ ತಜ್ಞರ ಸಮಿತಿ ರಚಿಸಿ ಭೌತಿಕ ಸಮೀಕ್ಷೆ ನಡೆಸಬೇಕು ಎಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಗಿದೆ. ಈ ಸಲಹೆಯನ್ನು ಪರಿಗಣಿಸಲಾಗುವುದು. ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ರೈತರು, ಬರಗಾಲ ಮತ್ತು ಕಸ್ತೂರಿರಂಗನ್ ವರದಿ ಸೇರಿದಂತೆ ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ. ಅಧಿವೇಶನದ ಮೊದಲ ದಿನವೇ ಕಸ್ತೂರಿರಂಗನ್ ವರದಿ ಕುರಿತು ಚರ್ಚೆ ನಡೆಸಲಾಗುವುದು. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಕ್ಕೂ ತೆರಳಿ ಅಲ್ಲಿನ ಜನರ ಅಭಿಪ್ರಾಯ ಆಲಿಸುತ್ತೇನೆ ಎಂದರು.

ಅರಣ್ಯ ಹಕ್ಕು ಕಾಯ್ದೆಯಡಿ ಇರುವ ಅವಧಿ ಕುರಿತ ಸಮಸ್ಯೆಯ ಬಗ್ಗೆಯೂ ಸಿಎಂ ಪ್ರಸ್ತಾಪಿಸಿದರು. “ಕೆಲವರಿಗೆ 25 ವರ್ಷ ಹಾಗೂ ಇತರರಿಗೆ 75 ವರ್ಷಗಳ ಮಿತಿ ಇದೆ. ಎಲ್ಲರಿಗೂ 25 ವರ್ಷಗಳ ಮಿತಿ ನಿಗದಿಪಡಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು.ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಅನಗತ್ಯ ತೊಂದರೆ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ ಅವರು, ಬಗರ್ಹುಕುಂ ಸಾಗುವಳಿ ಹಾಗೂ ಉಳುವವನಿಗೆ ಭೂಮಿ ನೀಡುವ ವಿಚಾರದಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದರು. ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ನಿಮ್ಮ ಬದುಕಿನ ಬಗ್ಗೆ ನಮಗೆ ಕಾಳಜಿ ಇದೆ. ನಿಮ್ಮ ಮುಂದೆ ಸುಮ್ಮನೆ ಘೋಷಣೆ ಮಾಡಿ ನಂತರ ಮರೆತುಬಿಡುವಂತಾಗಬಾರದು. ಸಿಕ್ಕ ಅವಕಾಶದಲ್ಲಿ ನಿಮಗೆ ಕೈಲಾದಷ್ಟು ಸೇವೆ ಮಾಡುತ್ತೇನೆ” ಎಂದು ಶಿವಕುಮಾರ್ ಹೇಳಿದರು. ಹೆಬ್ರಿಯಲ್ಲಿ ತಾಲೂಕು ಆಸ್ಪತ್ರೆ ಸೇರಿದಂತೆ ಜನಪ್ರತಿನಿಧಿಗಳು ಮುಂದಿಟ್ಟಿರುವ ಬೇಡಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ 60 ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಅವುಗಳಲ್ಲಿ 40 ನಿರ್ಣಯಗಳು ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿವೆ ಎಂದು ಮುಖ್ಯಮಂತ್ರಿ ಹೇಳಿದರು.ತುಳು ಭಾಷೆಗೆ ಕರಾವಳಿಯ ಎರಡು ಜಿಲ್ಲೆಗಳಲ್ಲಿ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಮೂಲಕ ಹೂಡಿಕೆ ಆಕರ್ಷಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶ ಸರ್ಕಾರಕ್ಕಿದೆ ಎಂದರು.

ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು, ಕಸ್ತೂರಿರಂಗನ್ ವರದಿಯಲ್ಲಿ ಉಪಗ್ರಹ ಆಧಾರಿತ ಸಮೀಕ್ಷೆಗಿಂತ ಸ್ಥಳೀಯ ವಾಸ್ತವಾಂಶ ಆಧರಿಸಿದ ಭೌತಿಕ ಸಮೀಕ್ಷೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಕೇರಳದಲ್ಲಿ ಉನ್ನತ ಮಟ್ಟದ ಅಧಿಕಾರಿ ಸಮಿತಿ ಮೂಲಕ ಭೌತಿಕ ಸಮೀಕ್ಷೆ ನಡೆಸಿ ನಾಡು ಮತ್ತು ಕಾಡಿನ ಗಡಿ ಗುರುತಿಸಲಾಗಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಿದರೆ ಜನವಸತಿ ಪ್ರದೇಶಗಳು ಹಾಗೂ ಕೃಷಿ ಭೂಮಿಗಳನ್ನು ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಾಗಲಿದೆ ಎಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟರು.

ಕಸ್ತೂರಿರಂಗನ್ ವರದಿಯಿಂದ ಶತಮಾನಗಳಿಂದ ಈ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಆತಂಕ ಉಂಟಾಗಿದೆ. ಅರಣ್ಯ ಸಂರಕ್ಷಣೆಯ ಅಗತ್ಯದ ಜೊತೆಗೆ ಸ್ಥಳೀಯರ ಬದುಕು, ಕೃಷಿ ಹಾಗೂ ಹಕ್ಕುಗಳಿಗೂ ರಕ್ಷಣೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಹಿರಿಯ ವಕೀಲ ಟಿ.ಬಿ. ಶೆಟ್ಟಿ, ಮಲೆಕುಡಿಯ ಸಮುದಾಯದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ, ಉಡುಪಿ ರೈತ ಸಂಘದ ಉದಯಕುಮಾರ್ ವಂಡ್ಸೆ, ನವೀನ್ ಅಡ್ಯಂತಯ್ಯ, ದಿನೇಶ್ ಹೆಗಡೆ, ಕೈಗಾರಿಕೋದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಸುನೀಲ್ ಕುಮಾರ್ ಸೇರಿದಂತೆ ಹಲವರು ಸಭೆಯಲ್ಲಿ ಮಾತನಾಡಿದರು. ತಜ್ಞರ ಸಮಿತಿ ರಚಿಸಿ ಭೌತಿಕ ಸಮೀಕ್ಷೆ ನಡೆಸಿ, ಅದರ ವರದಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಮೂಲಕ ಕಸ್ತೂರಿರಂಗನ್ ವರದಿಯಿಂದ ಉಂಟಾಗಿರುವ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಸಭೆಯಲ್ಲಿ ಪ್ರಮುಖವಾಗಿ ಕೇಳಿಬಂದ ಬೇಡಿಕೆಯಾಗಿತ್ತು.


