ಉಡುಪಿ : ಯಕ್ಷಸಿಂಚನ ಟ್ರಸ್ಟ್ (ರಿ.), ಬೆಂಗಳೂರು ಪ್ರತಿವರ್ಷ ಯಕ್ಷಗಾನ ಕ್ಷೇತ್ರದಲ್ಲಿ ಅಪರೂಪದ ಸೇವೆ ಸಲ್ಲಿಸಿದ ಮಹನೀಯರಿಗೆ ನೀಡುವ ‘ಸಾರ್ಥಕ ಸಾಧಕ’ ಪ್ರಶಸ್ತಿಯನ್ನು, ಈ ಬಾರಿ ಯಕ್ಷಗಾನದಲ್ಲಿ ನಾಲ್ಕು ದಶಕಗಳ ವಿಶಿಷ್ಟ ಸೇವೆಗಾಗಿ ಚೇರ್ಕಾಡಿ ಮಂಜುನಾಥ ಪ್ರಭು ಅವರಿಗೆ ನೀಡಲು ನಿರ್ಧರಿಸಿದೆ. ಸೆಪ್ಟೆಂಬರ್ 21ರಂದು ಬೆಂಗಳೂರಿನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ನಡೆಯುವ ಯಕ್ಷಸಿಂಚನದ 16ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಟ್ರಸ್ಟ್ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಜುನಾಥ ಪ್ರಭು ಅವರು ತಮ್ಮ ಕಲಾಪಯಣವನ್ನು ಮಂದಾರ್ತಿ ಮೇಳದಲ್ಲಿ ಆರಂಭಿಸಿ, ಆರಂಭದ ದಿನಗಳಲ್ಲಿ ನಿತ್ಯವೇಷಗಳನ್ನು ಮಾಡುತ್ತಾ, ಸಹಾಯಕ ಮದ್ದಲೆಗಾರರಾಗಿಯೂ ಅನುಭವ ಪಡೆದರು. ಬಳಿಕ ಪೆರ್ಡೂರು, ಅಮೃತೇಶ್ವರಿ, ಸಾಲಿಗ್ರಾಮ, ಸುರತ್ಕಲ್ ಮೊದಲಾದ ಮೇಳಗಳಲ್ಲಿ ಮದ್ದಲೆವಾದಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರು ಅಗರಿ ಭಾಗವತರು, ಶೇಣಿ ಗೋಪಾಲಕೃಷ್ಣ ಭಟ್, ಕುಂಬಳೆ ಸುಂದರರಾಯರು, ತೆಕ್ಕಟ್ಟೆ ಆನಂದ ಮಾಸ್ತರ್, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಗಜಾನನ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಅರಾಟೆ ಮಂಜುನಾಥ, ಕೋಟ ವೈಕುಂಠ, ಯಾಕ್ಟರ್ ಜೋಶಿ, ಕುಂಜಾಲು ರಾಮಕೃಷ್ಣ ಮೊದಲಾದ ಯಕ್ಷರಂಗದ ಮೇರು ಕಲಾವಿದರೊಂದಿಗೆ ಕೆಲಸ ಮಾಡುವ ಭಾಗ್ಯ ಹೊಂದಿದ್ದಾರೆ.

ಅದರ ಜೊತೆಗೆ, ಶಿಬಿರಗಳು ಮತ್ತು ತರಗತಿಗಳ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡಿದ ಅವರು, ಮಹಿಳಾ ಯಕ್ಷಗಾನ ತಂಡವನ್ನು ಪ್ರಾರಂಭಿಸಿ ನೂರಾರು ಮಹಿಳೆಯರು ಮತ್ತು ಮಕ್ಕಳಿಗೆ ಕಲಾಪಾಂಡಿತ್ಯವನ್ನು ಧಾರೆಯೆರಿಸಿದ್ದಾರೆ. ಡಾ. ಶಿವರಾಮ ಕಾರಂತರ ಯಕ್ಷರಂಗ ತಂಡದೊಂದಿಗೆ ರಷ್ಯಾ, ಅಬುಧಾಬಿ, ಮಸ್ಕತ್ ಮೊದಲಾದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿರುವುದು ಅವರ ವಿಶೇಷ ಸಾಧನೆಯಾಗಿದೆ.