ಉಡುಪಿ : ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮದ ಮಾಂಡಿಮೂರಕೈ ಬಳಿ ವಿಷದ ಹಾವು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ದುರ್ಮರಣ ಹೊಂದಿದ ದಾರುಣ ಘಟನೆ ನಡೆದಿದೆ. ಮೃತರನ್ನು ಮಾಂಡಿಮೂರಕೈ ನಿವಾಸಿ ಜಲಜಾಕ್ಷಿ ಶೆಡ್ತಿ (76) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಜಲಜಾಕ್ಷಿ ಶೆಡ್ತಿ ಅವರು ಮನೆಯಲ್ಲಿ ತಲೆಗೆ ಬಳಸುವ ಚೌರಿಯನ್ನು ತೆಗೆಯಲು ಚೀಲಕ್ಕೆ ಕೈ ಹಾಕಿದಾಗ, ಆ ಚೀಲದೊಳಗೆ ಅಡಗಿ ಕುಳಿತಿದ್ದ ವಿಷದ ಹಾವು ಬಲಗೈ ಬೆರಳಿಗೆ ಕಚ್ಚಿದೆ. ಹಾವಿನ ಕಚ್ಚಿದ ಬಳಿಕ ಅವರು ಕೆಲವೇ ನಿಮಿಷಗಳಲ್ಲಿ ಅಸ್ವಸ್ಥಗೊಂಡಿದ್ದಾರೆ.

ಗಂಭೀರ ಸ್ಥಿತಿಯಲ್ಲಿ ಇದ್ದ ಅವರನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ತಕ್ಷಣವೇ ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಮಾರ್ಗಮಧ್ಯೆ ಚಿಕಿತ್ಸೆಗೆ ಮುನ್ನವೇ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಘಟನೆ ಸಂಬಂಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



