ಉಡುಪಿ : ಕಾಪು ಠಾಣಾ ವ್ಯಾಪ್ತಿಯಲ್ಲಿ ಸುಮಾರು 20 ದಿನಗಳ ಹಿಂದೆ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವತಿಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಗುಣಮುಖಳಾಗಿ ಬಿಡುಗಡೆಯಾದ ಯುವತಿಯ ಸಂಬಂಧಿಕರ ಪತ್ತೆಯಾಗದ ಹಿನ್ನೆಲೆಯಲ್ಲಿ, ಪೊಲೀಸರ ಸಹಕಾರದೊಂದಿಗೆ ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಲಾಗಿದೆ.

ಗುಜರಾತ್ ಮೂಲದ 20 ವರ್ಷದ ಶ್ಯಾಮಿಲಿ ಯಾವುದೋ ಕಾರಣದಿಂದ ಮನನೊಂದು ಉಡುಪಿಗೆ ಬಂದು ಅಸಹಾಯಕ ಸ್ಥಿತಿಯಲ್ಲಿದ್ದಾಗ ವಿಶು ಶೆಟ್ಟಿ ಅವರ ಗಮನಕ್ಕೆ ಬಂದಿದ್ದರು. ಬಳಿಕ ಅವರನ್ನು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಯುವತಿಯ ಸಂಬಂಧಿಕರು ಪತ್ತೆಯಾಗದ ಹಿನ್ನೆಲೆಯಲ್ಲಿ ಮಹಿಳಾ ನಿಲಯಕ್ಕೆ ದಾಖಲಿಸಲಾಗಿದೆ.

ತನ್ನ ಪ್ರಿಯತಮ ಜೈಲಿನಲ್ಲಿರುವುದರಿಂದ ಮನನೊಂದು ಉಡುಪಿಗೆ ಬಂದಿರುವುದಾಗಿ ಯುವತಿ ತಿಳಿಸಿರುವುದಾಗಿ ವಿಶು ಶೆಟ್ಟಿ ಹೇಳಿದ್ದಾರೆ. ಯುವತಿಯ ಕುರಿತು ಮಾಹಿತಿ ಹೊಂದಿರುವವರು ಅಥವಾ ಆಕೆಯ ಸಂಬಂಧಿಕರು ನಿಟ್ಟೂರಿನ ರಾಜ್ಯ ಮಹಿಳಾ ನಿಲಯವನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ. ಯುವತಿಯ ಚಿಕಿತ್ಸೆ, ಔಷಧಿ ಹಾಗೂ ಕ್ಯಾಂಟೀನ್ ವೆಚ್ಚ ಸೇರಿದಂತೆ ಒಟ್ಟು ರೂ.17,000 ಖರ್ಚಾಗಿದ್ದು, ಅಂಬಲಪಾಡಿಯ ವ್ಯಾಪಾರಿ ಅಬ್ದುಲ್ಲಾ ಅವರು ರೂ.5,000 ನೆರವು ನೀಡಿದ್ದಾರೆ. ಉಳಿದ ರೂ.12,000ನ್ನು ವಿಶು ಶೆಟ್ಟಿ ಅವರು ಭರಿಸಿದ್ದಾರೆ. ಯುವತಿಯನ್ನು ಮಹಿಳಾ ನಿಲಯಕ್ಕೆ ದಾಖಲಿಸುವ ಕಾನೂನು ಪ್ರಕ್ರಿಯೆಯಲ್ಲಿ ಕಾಪು ಪೊಲೀಸರು ಸಹಕರಿಸಿದ್ದಾರೆ.


