ಉಡುಪಿ: ಬಡಜನತೆಗೆ ಭೂಸುಧಾರಣಾ ಕಾನೂನಿನ ಮೂಲಕ ಆರ್ಥಿಕ ಸ್ವಾತಂತ್ರ್ಯ ಕಲ್ಪಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರು ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿದೆ. ಅವರ ಕೊಡುಗೆಗಳನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ. ನನ್ನ ರಕ್ತದ ಪ್ರತಿಯೊಂದು ಹನಿಯೂ ಈ ದೇಶದ ಸಮೃದ್ಧಿ ಮತ್ತು ಬಲವರ್ಧನೆಗಾಗಿ ಎಂಬ ಅವರ ಘೋಷಣೆ ದೇಶದ ಅಭಿವೃದ್ಧಿಯ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಂಟಿಯಾಗಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನುಡಿದಂತೆ ನಡೆದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ದಿಟ್ಟ ನಾಯಕತ್ವ, ದೇಶದ ಏಕತೆ, ಸಮಗ್ರತೆ ಹಾಗೂ ಅಭಿವೃದ್ಧಿಗಾಗಿ ಅವರು ಮಾಡಿದ ತ್ಯಾಗ ಸದಾ ಸ್ಮರಣೀಯ. ಅದೇ ರೀತಿ, ರಾಷ್ಟ್ರದ ಏಕತೆಯ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ವಾತಂತ್ರ್ಯಾನಂತರ ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹ ಸಚಿವರಾಗಿ 565ಕ್ಕೂ ಹೆಚ್ಚು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವ ಮೂಲಕ ರಾಷ್ಟ್ರೀಯ ಏಕೀಕರಣಕ್ಕೆ ಭದ್ರ ಬುನಾದಿ ಹಾಕಿದರು. ಅವರ ದೂರದೃಷ್ಟಿ, ಆತ್ಮವಿಶ್ವಾಸ ಮತ್ತು ದಿಟ್ಟ ನಿರ್ಧಾರಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿವೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿಸುವ ಉದ್ದೇಶದಿಂದ ಹಸಿರು ಕ್ರಾಂತಿಗೆ ಉತ್ತೇಜನ ನೀಡಿದ್ದು, ಜನಸಾಮಾನ್ಯರಿಗೂ ಬ್ಯಾಂಕ್ ಸಾಲ ಸೌಲಭ್ಯ ದೊರೆಯುವಂತೆ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದು ಇಂದಿರಾ ಗಾಂಧಿ ಅವರ ಪ್ರಮುಖ ಸಾಧನೆಗಳಾಗಿವೆ. ‘ಉಳುವವನಿಗೆ ಭೂಮಿ’ ಎಂಬ ಆಶಯದ ಭೂಸುಧಾರಣಾ ಕಾನೂನು, ಬಡತನ ನಿರ್ಮೂಲನೆಗಾಗಿ 20 ಅಂಶಗಳ ಕಾರ್ಯಕ್ರಮ ಹಾಗೂ ಜೀತ ಪದ್ಧತಿಯ ನಿರ್ಮೂಲನೆಗೆ ಕೈಗೊಂಡ ಕ್ರಮಗಳು ದೇಶದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಮಹತ್ವದ ಕೊಡುಗೆ ನೀಡಿವೆ ಎಂದು ಹೇಳಿದರು.ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಆಚರಿಸುವುದು ದೇಶದ ಏಕತೆ ಮತ್ತು ಸಮಗ್ರತೆಗಾಗಿ ಅವರು ಸಲ್ಲಿಸಿದ ಐತಿಹಾಸಿಕ ಸೇವೆಗೆ ಸಲ್ಲಿಸುವ ಗೌರವದ ಸಂಕೇತವಾಗಿದೆ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಹಿರಿಯ ಮುಖಂಡರಾದ ಭುಜಂಗ ಶೆಟ್ಟಿ ಹಾಗೂ ಉದ್ಯಾವರ ನಾಗೇಶ್ ಕುಮಾರ್ ಅವರು ದೇಶದ ಇಬ್ಬರು ಮಹಾನ್ ನಾಯಕರ ಆದರ್ಶಗಳು, ಹೋರಾಟ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ಪ್ರಶಾಂತ್ ಜತ್ತನ್ನ, ದಿನೇಶ್ ಪುತ್ರನ್, ಬಿ. ನರಸಿಂಹಮೂರ್ತಿ, ಶರ್ಪುದ್ದೀನ್ ಶೇಖ್, ಭಾಸ್ಕರ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಅಹ್ಮದ್, ಮಹಾಬಲ ಕುಂದರ್, ಕೀರ್ತಿ ಶೆಟ್ಟಿ, ಗಣನಾಥ ಎಕ್ಕಾರ್, ಶಶಿಧರ ಶೆಟ್ಟಿ ಎಲ್ಲೂರು, ಜಯಕುಮಾರ್, ಲಕ್ಷೀಶ ಶೆಟ್ಟಿ, ಶೇಖ್ ವಹೀದ್, ಪ್ರಶಾಂತ್ ಪೂಜಾರಿ, ಸತೀಶ್ ಕೊಡವೂರು, ಸತೀಶ್ ಮಂಚಿ, ಸಂಜಯ ಆಚಾರ್ಯ, ಅನಿತಾ ಪೂಜಾರಿ, ಮಮತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ರೇಖಾ ಸುವರ್ಣ, ಪುಷ್ಪ ಆಂಚನ್, ಸಂಧ್ಯಾ ತಿಲಕ್ ರಾಜ್, ಜ್ಯೋತಿ ಪುತ್ರನ್, ಸುಕನ್ಯ ಪೂಜಾರಿ, ವಾಣಿ ಶೆಟ್ಟಿ, ಸುಧಾ ಪೂಜಾರಿ, ರೇವತಿ ಶೆಟ್ಟಿ, ಮಮತಾ ಕಿಶೋರ್, ಜ್ಯೋತಿ ನಾಯ್ಕ, ಸುಗಂಧಿ ಶೇಖರ್, ಜಯಶ್ರೀ ಶೆಟ್ ಹಾಗೂ ಸರಸ್ವತಿ ನಾಯ್ಕ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೋಪಿ ನಾಯ್ಕ ವಂದಿಸಿದರು.


