ಉಡುಪಿ : ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿಯಲ್ಲಿ ನಿರ್ಮಿತವಾಗಿರುವ ಘನ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಇಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಉದ್ಘಾಟಿಸಿದರು. ಘಟಕದ ಉದ್ಘಾಟನೆಯ ವೇಳೆ ಸ್ಥಳೀಯರು ಕಪ್ಪು ಪಟ್ಟಿ ಧರಿಸಿ ತೀವ್ರ ಪ್ರತಿಭಟನೆ ನಡೆಸಿದರು. ಘಟಕದಿಂದ ಪರಿಸರ ಹಾನಿಯಾಗುವ ಭೀತಿ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಉದ್ಘಾಟನೆ ಕಾನೂನುಬಾಹಿರವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆ ನಡೆಸಿದ ಸ್ಥಳೀಯರು ಮಾತನಾಡಿ, ಘಟಕಕ್ಕೆ ಸಿಆರ್‌ಝೆಡ್ ಅನುಮತಿ ಸಿಕ್ಕಿಲ್ಲ, ಜೊತೆಗೆ ಲೋಕಾಯುಕ್ತದಲ್ಲಿ ಪ್ರಕರಣ ಬಾಕಿ ಇದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಉದ್ಘಾಟನೆ ನಡೆಸಿರುವುದು ಕಾನೂನು ಉಲ್ಲಂಘನೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಘಟಕದಿಂದ ಸ್ಥಳೀಯರಿಗೆ ತೊಂದರೆ ಉಂಟಾಗುವುದು ನಿಶ್ಚಿತ. ಪರಿಸರ ಹಾನಿಯ ಜೊತೆಗೆ ಜನರ ಆರೋಗ್ಯಕ್ಕೂ ಅಪಾಯ ಎದುರಿಸಬೇಕಾಗುತ್ತದೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಉದ್ಘಾಟನೆ ಮಾಡುವುದು ಸರಿಯಲ್ಲ.ಮುಂದೆ ಘಟಕದ ವಿರುದ್ಧ ತೀರ್ಪು ಬಂದು ಕೋಟ್ಯಾಂತರ ರೂ. ನಷ್ಟವಾದರೆ ಅದಕ್ಕೆ ಅಧಿಕಾರಿಗಳು ಹಾಗೂ ಇಂದಿನ ಜನಪ್ರತಿನಿಧಿಗಳೇ ನೇರ ಹೊಣೆಗಾರರು ಎಂದು ಪ್ರತಿಭಟನಾನಿರತ ಸ್ಥಳೀಯರು ಎಚ್ಚರಿಸಿದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದ ವೇಳೆಯೇ ಪಾರಂಪಳ್ಳಿಯಲ್ಲಿ ನಡೆದ ಘಟಕ ಎಸ್ ಎಲ್ ಆರ್ ಎಂ ಘಟಕ ಉದ್ಘಾಟನೆ ರಾಜಕೀಯ ಮತ್ತು ಸ್ಥಳೀಯ ಅಸಮಾಧಾನಕ್ಕೆ ಕಾರಣವಾಗಿದ್ದು, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ವಿವಾದ ಮುಂದುವರಿದಿದೆ.


