ಉಡುಪಿ : ಉಡುಪಿ ಪೊಲೀಸ್ ರು ಗೋ ಕಳ್ಳರ ವಿರುದ್ಧ ಅಕ್ಷರಶಃ ಸಮರ ಸಾರಿದ್ದಾರೆ. ಮಳೆಗಾಲ ಆರಂಭವಾದ ಬಳಿ ಜಿಲ್ಲೆಯಾದ್ಯಂತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಸತತ ಕಾರ್ಯಚರಣೆಗಳ ಮೂಲಕ ಆರೋಪಿಗಳನ್ನು ಜೈಲಿಗಟ್ಟುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಬೆಳಗಿನ ಜಾವ 03:50 ಗಂಟೆಗೆ ಹುಣ್ಸೆಮಕ್ಕಿ ಕಡೆಯಿಂದ ಒಂದು ಸ್ಕಾರ್ಪಿಯೊ ವಾಹನದಲ್ಲಿ 3 ಜನ ಕಳ್ಳರು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಬಿದ್ಕಲಕಟ್ಟೆ ಪೇಟೆಯ ಬಳಿ ವಾಹನದಿಂದ ಕೆಳಗೆ ಇಳಿದಿದ್ದರು.

ಅಲ್ಲಿಯೇ ರಸ್ತೆ ಪಕ್ಕದಲ್ಲಿ ಮಲಗಿದ್ದ ಒಂದು ಹಸುವನ್ನು ಹಿಡಿದು ಹಿಂಸಾತ್ಮಕವಾಗಿ ಎಳೆದು ಅವರು ಬಂದಿರುವ ವಾಹನಕ್ಕೆ ತುಂಬಿಸಿ ಕಳವು ಮಾಡಿದ್ದರು, ಬಳಿಕ ಈ ವಾಹನ ಶಿರಿಯಾರ ಕಡೆಗೆ ಹೋಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಬ್ರಹ್ಮಾವರ ಪೊಲೀಸರು, ಕೋಟ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಸದ್ಯ ಇಮ್ರಾನ್ ಹಾಗೂ ಇರ್ಷಾದ್ (31) ಎಂಬ ಇಬ್ಬರನ್ನು ವಶಕ್ಕೆ ಪಡೆದು, ಗೋ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಇಮ್ರಾನ್ ವಿರುದ್ಧ ಒಟ್ಟು 35 ಗೋ ಕಳ್ಳತನದ ಪ್ರಕರಣಗಳಿದ್ದು, ಇನ್ನೋರ್ವ ಆರೋಪಿ ಇರ್ಶಾದ್ ವಿರುದ್ಧ ಒಟ್ಟು 14 ಪ್ರಕರಣಗಳು ಈವರೆಗೆ ದಾಖಲಾಗಿರುತ್ತದೆ.