ಉಡುಪಿ : ಉಡುಪಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರ ತಂಡವು 44 ವರ್ಷದ ಮಹಿಳೆಯೊಬ್ಬರ ಗರ್ಭಕೋಶದಲ್ಲಿ ಬೆಳೆಯುತ್ತಿದ್ದ ಸುಮಾರು 8 ಕೆ.ಜಿ. ತೂಕದ ಬೃಹತ್ ಗಡ್ಡೆಯನ್ನು (ಫೈಬ್ರಾಯ್ಡ್ ಯುಟರಸ್) ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಮತ್ತೊಂದು ವೈದ್ಯಕೀಯ ಸಾಧನೆ ಮೆರೆದಿದೆ. ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಬಳಿಕ ಅವರು ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದರು.

ಆಸ್ಪತ್ರೆಯ ತಜ್ಞ ವೈದ್ಯರು ಮಹಿಳೆಯನ್ನು ಪರೀಕ್ಷಿಸಿದ ವೇಳೆ ಆಕೆಯ ಹೊಟ್ಟೆ ಗರ್ಭಿಣಿಯರ ಹೊಟ್ಟೆಯಂತೆ ಅಸಹಜವಾಗಿ ಉಬ್ಬಿಕೊಂಡಿರುವುದು ಗಮನಕ್ಕೆ ಬಂದಿದೆ. ಆರಂಭದಲ್ಲಿ ನೀರು ತುಂಬಿದ ಗಡ್ಡೆಯಿರುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಿದರು. ಪರೀಕ್ಷೆಯಲ್ಲಿ ಗರ್ಭಕೋಶದಲ್ಲಿ ಬೃಹತ್ ಗಾತ್ರದ ಗಡ್ಡೆ ಇರುವುದನ್ನು ದೃಢಪಡಿಸಲಾಯಿತು.

ಪ್ರಕರಣದ ಗಂಭೀರತೆಯನ್ನು ಮನಗಂಡ ವೈದ್ಯರು ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಹೆಚ್. ಅಶೋಕ್ ಅವರೊಂದಿಗೆ ಸಮಾಲೋಚನೆ ನಡೆಸಿ ತಕ್ಷಣ ಶಸ್ತ್ರಚಿಕಿತ್ಸೆಗೆ ಮುಂದಾದರು. ಮೇ 25ರಂದು ನಡೆದ ಶಸ್ತ್ರಚಿಕಿತ್ಸೆಯಲ್ಲಿ ಸುಮಾರು 8 ಕೆ.ಜಿ. ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಯಿತು. ಶಸ್ತ್ರಚಿಕಿತ್ಸೆಯನ್ನು ಸ್ತ್ರೀರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ. ಕವಿತಾ ಹಾಗೂ ಡಾ. ಅಮೃತಾಂಶ್ ಅವರ ತಂಡ ನಡೆಸಿತು. ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ ಮತ್ತು ಡಾ. ರಾಜ್‌ಗೋಪಾಲ್ ಭಂಡಾರಿ, ಶುಶ್ರೂಷಾಧಿಕಾರಿ ರಕ್ಷಿತಾ ಹಾಗೂ ಓ.ಟಿ. ಸಹಾಯಕಿ ಸಂಗೀತ ಅವರು ಸಹಕರಿಸಿದರು.

ಇಷ್ಟೊಂದು ದೊಡ್ಡ ಗಾತ್ರದ ಗಡ್ಡೆಯನ್ನು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ಹೊರತೆಗೆದ ವೈದ್ಯಕೀಯ ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಶ್ಲಾಘಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಲಭ್ಯವಿರುವುದಕ್ಕೆ ಈ ಯಶಸ್ಸು ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.



