ಉಡುಪಿ: ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿತ ಮರಳು, ಮಣ್ಣು, ಕಲ್ಲು ಸಾಗಿಸುವ ವಾಹನಗಳ ಅತೀವೇಗ ಚಾಲನೆಯಿಂದ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಎಲ್ಲಾ 6 ಚಕ್ರ ಮತ್ತು ಅದಕ್ಕಿಂತ ಮೇಲ್ಪಟ್ಟ ವಾಹನಗಳಿಗೆ ಗರಿಷ್ಠ 60 ಕಿ.ಮೀ. ವೇಗ ಮಿತಿಯ ಸ್ಪೀಡ್ ಗವರ್ನರ್ (ವೇಗ ನಿಯಂತ್ರಕ) ಅಳವಡಿಕೆ ಕಡ್ಡಾಯಗೊಳಿಸಲು ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರ ನಿರ್ಧರಿಸಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ನಿಯಮ ಪಾಲನೆಗಾಗಿ ಲಾರಿ ಚಾಲಕರು ಮತ್ತು ಮಾಲಕರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಚಾಲಕರಿಗೆ ಮಾಹಿತಿ ಕೊರತೆ ಉಂಟಾಗದಂತೆ ಮುಂದಿನ ದಿನಗಳಲ್ಲಿ ಜಾಗೃತಿ ಕರಪತ್ರಗಳನ್ನು ವಿತರಿಸಲಾಗುವುದು ಎಂದರು.

ಇದೇ ವೇಳೆ ಬಸ್‌ಗಳಲ್ಲಿ ಬಾಗಿಲು ಅಳವಡಿಕೆ ಸಂಬಂಧ ಜ.20 ಕೊನೆಯ ದಿನಾಂಕವಾಗಿದ್ದು, ನಂತರ ಬಾಗಿಲು ಇಲ್ಲದ ಬಸ್‌ಗಳಿಗೆ ದಂಡ ವಿಧಿಸಲಾಗುವುದು ಅಥವಾ ಬಸ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.



