ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಕಡಲ ತೀರದಲ್ಲಿ ಶನಿವಾರ ಬೃಹತ್ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಅಲೆಗಳೊಂದಿಗೆ ದಡಕ್ಕೆ ತೇಲಿಬಂದಿದ್ದು, ಕಡಲ ತೀರದಲ್ಲಿ ಮೀನುಗಳ ರಾಶಿಯೇ ಕಂಡುಬಂತು.

ಕೋಡಿ ಕಡಲ ತೀರದ ನೂರಾರು ಮೀಟರ್ ಉದ್ದಕ್ಕೂ ಬೂತಾಯಿ ಮೀನುಗಳು ಬಿದ್ದಿದ್ದವು. ಅಪಾರ ಪ್ರಮಾಣದಲ್ಲಿ ಮೀನುಗಳು ದಡಕ್ಕೆ ಬಂದು ಬಿದ್ದಿರುವುದನ್ನು ಕಂಡ ಸ್ಥಳೀಯರು ಹಾಗೂ ಸಾರ್ವಜನಿಕರು ಮೀನುಗಳನ್ನು ಹೆಕ್ಕಲು ಮುಗಿಬಿದ್ದರು. ಚೀಲ, ಬುಟ್ಟಿ ಸೇರಿದಂತೆ ಸಿಕ್ಕ ಸಿಕ್ಕ ಪಾತ್ರೆಗಳಲ್ಲಿ ಮೀನುಗಳನ್ನು ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು. ಕಡಲ ತೀರದಲ್ಲಿ ಉಚಿತವಾಗಿ ದೊರೆತ ಮೀನುಗಳನ್ನು ಸಂಗ್ರಹಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಕರಾವಳಿ ಭಾಗದಲ್ಲಿ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಕುಂದಾಪುರದ ಮರವಂತೆ, ಹೆಜಮಾಡಿ ಹಾಗೂ ಮಂಗಳೂರಿನ ಉಳ್ಳಾಲ ಕಡಲ ತೀರಗಳಲ್ಲಿಯೂ ಬೃಹತ್ ಪ್ರಮಾಣದಲ್ಲಿ ಬೂತಾಯಿ ಮೀನುಗಳು ದಡಕ್ಕೆ ತೇಲಿಬಂದಿದ್ದವು. ಸಮುದ್ರದ ತಳಭಾಗದಲ್ಲಿ ಆಮ್ಲಜನಕದ ಕೊರತೆ ಉಂಟಾಗುವುದು ಅಥವಾ ಸಮುದ್ರದ ನೀರಿನ ಉಷ್ಣಾಂಶದಲ್ಲಿ ದಿಢೀರ್ ಬದಲಾವಣೆಯಾಗುವುದು ಸೇರಿದಂತೆ ವಿವಿಧ ಕಾರಣಗಳಿಂದ ಮೀನುಗಳ ಹಿಂಡು ದಿಕ್ಕು ತಪ್ಪಿ ದಡದತ್ತ ಬರುವ ಸಾಧ್ಯತೆಯಿದೆ ಎಂದು ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.


