Friday, March 13, 2026

spot_img

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವೈಭವದ ರಥೋತ್ಸವ..

ಉಡುಪಿ : ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ವೈಭವದ ಬ್ರಹ್ಮರಥೋತ್ಸವ ಗುರುವಾರ ಭಕ್ತಿಭಾವದಿಂದ ನೆರವೇರಿತು. ಮೂಕಾಂಬಿಕಾ ದೇವಿಯ ವಿಜೃಂಭಣೆಯ ಉತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಹೊರರಾಜ್ಯ ಮತ್ತು ವಿದೇಶಗಳಿಂದಲೂ ಆಗಮಿಸಿದ್ದ ಸಹಸ್ರಾರು ಭಕ್ತರು ಸಾಕ್ಷಿಯಾದರು.

ದೇಗುಲದ ಹಿರಿಯ ಅರ್ಚಕ ಕೆ.ಎನ್. ಗೋವಿಂದ ಅಡಿಗ ಅವರ ನೇತೃತ್ವದಲ್ಲಿ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ ಜೋಡಿ ಉತ್ಸವ ಮೂರ್ತಿಗಳನ್ನು ಗರ್ಭಗುಡಿಯಿಂದ ಹೊರತಂದು ದೇವಸ್ಥಾನದ ಸುತ್ತ ಪೌಳಿಯಲ್ಲಿ ಮೂರು ಸುತ್ತು ಉತ್ಸವ ನಡೆಸಲಾಯಿತು. ನಂತರ ಓಡು ಬಲಿ ಸೇವೆಗಾಗಿ ಉತ್ಸವ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಸೌಪರ್ಣಿಕ ನದಿ ತೀರಕ್ಕೆ ಕೊಂಡೊಯ್ಯಲಾಯಿತು.

ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಗರ್ಭಗುಡಿಯಿಂದ ತರಲಾದ ಜೋಡಿ ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥಪೂಜೆ ನೆರವೇರಿಸಲಾಯಿತು. ಸಾವಿರಾರು ಭಕ್ತರ ಜಯಘೋಷದ ನಡುವೆ ಬೀದಿ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ರಥೋತ್ಸವ ನಡೆಯಿತು. ಸಂಜೆ ಐದು ಗಂಟೆಯ ಬಳಿಕ ದೇವರನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥಬೀದಿಯಲ್ಲಿ ಶಂಕರಾಶ್ರಮದವರೆಗೆ ರಥವನ್ನು ಎಳೆಯಲಾಯಿತು. ನಂತರ ಸಂಪ್ರದಾಯದಂತೆ ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು.

ರಥೋತ್ಸವದ ವೇಳೆ ಚೆಂಡೆ ವಾದನ, ತಟ್ಟಿರಾಯ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳ ಪ್ರದರ್ಶನಗಳು ನಡೆದವು. ದೇವಸ್ಥಾನದ ಒಳ ಮತ್ತು ಹೊರಾವರಣವನ್ನು ಹೂವು ಹಾಗೂ ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಸುಮಾರು ಮುಕ್ಕಾಲು ಕಿಲೋಮೀಟರ್ ಉದ್ದದ ರಥಬೀದಿಯನ್ನು ಹೂವಿನ ಹಾಸುಗಳಿಂದ ಅಲಂಕರಿಸಿದ್ದು ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಮಾರ್ಚ್ ಐದರಿಂದ ಆರಂಭವಾದ ಕ್ಷೇತ್ರದ ವಾರ್ಷಿಕ ಉತ್ಸವದ ಅಂಗವಾಗಿ ಪ್ರತಿದಿನವೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ದೇವಾಲಯದ ಆವರಣದಲ್ಲಿ ಪ್ರತಿದಿನ ಸಂಜೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕಲಾತಂಡಗಳು ಮತ್ತು ಕಲಾವಿದರಿಂದ ಸೇವಾ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸೇರಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರು, ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles