Saturday, May 30, 2026

spot_img

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್‌ ಬೃಹತ್ ಪ್ರತಿಭಟನೆ

ಉಡುಪಿ : ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಬ್ರಹ್ಮಗಿರಿ ವೃತ್ತ, ಪ್ರಮುಖ ರಸ್ತೆ ಮಾರ್ಗಗಳನ್ನು ದಾಟಿ ಅಜ್ಜರಕಾಡು ಹುತಾತ್ಮ ಸ್ಮಾರಕದವರೆಗೆ ಸಾಗಿತು. ಪ್ರತಿಭಟನಾಕಾರರು ಎಸ್‌ಐಆರ್ ಪ್ರಕ್ರಿಯೆ, ನೀಟ್ ಪ್ರಶ್ನೆಪತ್ರಿಕೆ ಹಗರಣ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ನೀತಿಗಳನ್ನು ತೀವ್ರವಾಗಿ ವಿರೋಧಿಸಿದರು. ಮೆರವಣಿಗೆಯುದ್ದಕ್ಕೂ ಜನವಿರೋಧಿ ನೀತಿಗಳನ್ನು ಹಿಂಪಡೆಯಿರಿ, ಬೆಲೆ ಏರಿಕೆ ನಿಯಂತ್ರಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಎಂಬ ಘೋಷಣೆಗಳು ಮೊಳಗಿದವು. ಕಾರ್ಯಕರ್ತರು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಕೇಂದ್ರ ಸರ್ಕಾರದ ನೀತಿಗಳಿಂದ ಸಾಮಾನ್ಯ ಜನರ ಜೀವನ ದುಸ್ತರವಾಗುತ್ತಿದೆ ಎಂದು ಆರೋಪಿಸಿದರು. ನೀಟ್ ಹಗರಣದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದರ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಧ್ಯಮ ವರ್ಗ ಮತ್ತು ಬಡಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಕ್ಕುಗಳನ್ನು ರಕ್ಷಿಸುವ ಬದಲು ಕೇಂದ್ರ ಸರ್ಕಾರ ಜನವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದ ಮುಖಂಡರು, ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಮಂಜುನಾಥ ಪೂಜಾರಿ ಹೆಬ್ರಿ, ಸತೀಶ್ ಕೊಡವೂರು, ಹರಿಪ್ರಸಾದ್ ರೈ, ಪ್ರಸಾದ್ ಕಾಂಚನ್, ರಮೇಶ್ ಕಾಂಚನ್, ಹರೀಶ್ ಕಿಣಿ, ಕಿಶನ್ ಹೆಗ್ಡೆ, ಸೌರಭ್ ಬಲ್ಲಾಳ್, ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನೆ ವೇಳೆ ಪೊಲೀಸ್ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು, ನಗರದಲ್ಲಿ ಕೆಲಕಾಲ ಪ್ರತಿಭಟನೆಯ ಕಾವು ಕಂಡುಬಂತು. ಕಾಂಗ್ರೆಸ್ ಮುಖಂಡರು ಮುಂದಿನ ದಿನಗಳಲ್ಲಿಯೂ ಜನಪರ ಹೋರಾಟಗಳನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles