ಉಡುಪಿಯ ಮಣಿಪಾಲದಲ್ಲಿ ಸಿನಿಮಾ ಸ್ಟೈಲ್ ನಲ್ಲಿ ಪೊಲೀಸರು ನಡೆಸಿದ ರೋಚಕ ಕಾರ್ಯಾಚರಣೆಯಲ್ಲಿ ಕುಖ್ಯಾತ ಕ್ರಿಮಿನಲ್ ಓರ್ವ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಓರ್ವ ಆರೋಪಿಯನ್ನ ಪೊಲೀಸರು ಚೇಸಿಂಗ್ ಮಾಡುವ ವೇಳೆ ನಡೆದ ಸರಣಿ ಅಪಘಾತ ನಡೆದಿದೆ. ಈ ವೇಳೆ ಮಣಿಪಾಲ ಪೊಲೀಸರ ಕೈಯಿಂದ ಕೂದಲೆಳೆ ಅಂತರದಲ್ಲಿ ಗರುಡ ಗ್ಯಾಂಗ್ ಹೆಸರಿನ ಕುಖ್ಯಾತ ಗ್ಯಾಂಗ್ ಮೆಂಬರ್ ಇಸಾಕ್ ಎಸ್ಕೇಪ್ ಆಗಿದ್ದಾನೆ

ಇಸಾಕ್ ಕುಖ್ಯಾತ ಗರುಡ ಗ್ಯಾಂಗ್ ನ ದಿ ಮೋಸ್ಟ ವಾಂಟೆಡ್ ಕ್ರಿಮಿನಲ್, ಬೆಂಗಳೂರು ನೆಲಮಂಗಲ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯ ಜಾಡು ಹಿಡಿದು ಉಡುಪಿಯ ಮಣಿಪಾಲಕ್ಕೆ ಬಂದಿದ್ದರು. ಈ ವೇಳೆ ಮಹೀಂದ್ರ ಥಾರ್ ಕಾರಿನಲ್ಲಿ ಮಣಿಪಾಲಕ್ಕೆ ಬಂದಿದ್ದ ಇಸಾಕ್, ಮಣಿಪಾಲದಲ್ಲಿರುವ ಗೆಳತಿ ಸುಜೈನ್ (25) ಮನೆಗೆ ಆರೋಪಿ ಇಸಾಕ್ ಬರುವುದು ಖಚಿತವಾಗುತ್ತಿದ್ದಂತೆ, ಅರೋಪಿಯ ಬರುವಿಕೆಗೆ ಪೊಲೀಸರು ಕಾಯುತ್ತಾ ಕುಳಿತಿದ್ದರು. ರಾತ್ರಿ 8:00 ಸುಮಾರಿಗೆ ಸುಜೈನ್ ಹಾಗೂ ಆಕೆಯ ತಂಗಿ ಹತ್ತಿರದ ಮೊಬೈಲ ಅಂಗಡಿಗೆ ತೆರಳಿದ್ದರು. ಇದೆ ವೇಳೆ ನಕಲಿ ನೋಂದಣಿ ಇರುವ ಕಪ್ಪು ಬಣ್ಣದ ಮಹೇಂದ್ರ ಥಾರ್ ವಾಹನದಲ್ಲಿ ವ್ಯಕ್ತಿಯೋರ್ವ ಆಗಮಿಸಿದ್ದ. ಅನುಮಾನಾಸ್ಪದವಾಗಿ ಕಂಡ ಹಿನ್ನಲೆಯಲ್ಲಿ ಪೊಲೀಸರು ಆ ವಾಹನವನ್ನು ಹಿಂಬಾಲಿಸಿದ್ದಾರೆ. ಇದೇ ವೇಳೆ ಮಹೇಂದ್ರ ಥಾರ್ ವಾಹನ ಸ್ವಲ್ಪ ದೂರ ಹೋಗಿ ಯೂ ಟರ್ನ್ ತೆಗೆದುಕೊಂಡು ಸುಜೈನ್ ನಿಂತಿದ್ದ ಮೊಬೈಲ್ ಅಂಗಡಿ ನಿಂತಾಗ, ಮಹೇಂದ್ರ ಥಾರ್ ವಾಹನದಲ್ಲಿರುವುದು ಇಸಾಕ್ ಎನ್ನುವುದು ಪೊಲೀಸರಿಗೆ ಖಚಿತವಾಗಿದೆ. ಪೊಲೀಸರು ಬೆನ್ನು ಬಿದ್ದಿರುವುದನ್ನು ಗಮನಿಸಿ ಪೊಲೀಸ್ ಸಿಬ್ಬಂದಿ ವಿಶ್ವನಾಥ್ ಅವರಿಗೆ ಥಾರ್ ಡಿಕ್ಕಿ ಹೊಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ರಸ್ತೆಯ ಪಕ್ಕದಲ್ಲಿ ನಿಂತಿದ್ದ ವಾಹನಗಳಿಗೆ ಸರಣಿ ಅಪಘಾತ ನಡೆಸಿ ಮಣಿಪಾಲದ ಮಣ್ಣಪಳ್ಳ ರಸ್ತೆಯತ್ತ ಮಹೇಂದ್ರ ಥಾರ್ ವಾಹನ ತಿರುಗುಸಿದ್ದಾನೆ. ಆದರೆ ಮಣ್ಣಂಪಲ್ಲ ಬಳಿ ಆರೋಪಿಯ ಮಹೇಂದ್ರ ಥಾರ್ ಟೈಯರ್ ಪಂಚರ್ ಆದ ಹಿನ್ನೆಲೆಯಲ್ಲಿ ತನ್ನ ಗೆಳತಿಯೊಂದಿಗೆ ಕತ್ತಲೆಯಲ್ಲಿ ಇಸಾಕ್ ತಪ್ಪಿಸಿಕೊಂಡಿದ್ದಾನೆ. ಇತ್ತ ಸರಣಿ ಅಪಘಾತವಾದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಇಸಾಕ್ ತಪ್ಪಿಸಿಕೊಳ್ಳಲು ಆ ಸಮಯ ಅನುಕೂಲವಾಯಿತು.

ಮತ್ತೆ ತಕ್ಷಣ ಮೊಬೈಲ್ ಲೊಕೇಶನ್ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದಾಗ ಆರೋಪಿ ಇಸಾಕ್ ಗೆಳತಿ ಸುಜೈನ್ ಇಂದ್ರಾಳಿಯಲ್ಲಿ ಆಕೆಯ ಅಕ್ಕನ ಮನೆಯಲ್ಲಿ ಇರುವುದು ತಿಳಿದುಬಂದಿದೆ. ಸದ್ಯ ಪೊಲೀಸರು ಆಕೆಯನ್ನ ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ. ಕೇರಳ ಮೂಲದ ಸುಜನ್ ಹಲವು ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿದ್ದು ಕಾನೂನು ಪದವಿ ಪಡೆದಿದ್ದಾಳೆ. ಪ್ರಸ್ತುತ ಆಕೆಯ ಖರ್ಚು ವೆಚ್ಚಗಳನ್ನು ಆರೋಪಿ ಇಸಾಕ್ ಬರುತ್ತಿದ್ದ ಎನ್ನಲಾಗಿದ್ದು ದೊಡ್ಡನ ಗುಡ್ಡೆಯಲ್ಲಿ ವಾಸವಿರುವ ಆಕೆಯ ತಾಯಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಫ್ಲಾಟ್ ಒಂದರಲ್ಲಿ ಸಹೋದರಿಯೊಂದಿಗೆ ವಾಸವಾಗಿದ್ದು ಆರೋಪಿ ಆಗಾಗ ಅಲ್ಲಿಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದೆ.
ಬೈಂದೂರು ಮೂಲದ ಇಸಾಕ್ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದ 40 ಲಕ್ಷ ರೂಪಾಯಿ ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಮಾಡಕುವಷ್ಟು ಪೂರೈಕೆ ಹಲ್ಲೆ ದರೋಡೆ ಹಲವು ಪ್ರಕರಣಗಳು ಈತನ ಮೇಲಿದ್ದು ಕಳೆದ ವರ್ಷ ಉಡುಪಿಯ ಕುಂಜುಬೆಟ್ಟು ಬಳಿ ನಡೆದ ಗ್ಯಾಂಗ್ ವಾರ್ ನ ಪ್ರಮುಖ ಸೂತ್ರದಾರ ಈತ. ಉಡುಪಿ, ಮಂಗಳೂರು ಸಹಿತ ವಿವಿಧ ಜಿಲ್ಲೆಗಳಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳಿದ್ದು, ಪೊಲೀಸರು ಈತನ ಮೇಲೆ ನಿಗಾ ಇಟ್ಟಿದ್ದರು. ಸದ್ಯ ಎಸ್ಕೇಪ್ ಆಗಿರುವ ಆರೋಪಿ ಮಣಿಪಾಲದ ಮಣ್ಣಂಪಳ್ಳದಿಂದ ಎಲ್ಲಿ ಹೋಗಿದ್ದಾನೆ ಎನ್ನುವ ತನಿಖೆ ನಡೆಯುತ್ತಿದೆ.
ಏನಿದು ಗರುಡ ಗ್ಯಾಂಗ್
ಸರಿಸುಮಾರು ಹತ್ತು ವರ್ಷಗಳ ಹಿಂದೆ ಗ್ಯಾಂಗ್ ವಾರ್ ಮಾಡುವ ಉದ್ದೇಶಕ್ಕೆ ಕಾಪುವಿನಲ್ಲಿ ಪ್ರಾರಂಭಗೊಂಡಿತ್ತು ಗರುಡ ಗ್ಯಾಂಗ್. ಸುಲಿಗೆ ಕಳ್ಳತನ ದನಕಳ್ಳತನ ಹೀಗೆ ಹಲವು ಸಣ್ಣಪುಟ್ಟ ಕ್ರಿಮಿನಲ್ ಚಟುವಟಿಕೆ ಮಾಡಿಕೊಂಡಿದ್ದ ಗರುಡ ಗ್ಯಾಂಗ್ ರಾಜ್ಯ ಮಟ್ಟದಲ್ಲಿ ಹೆಸರು ಸಂಪಾದಿಸಿದ್ದು ಉಡುಪಿಯಲ್ಲಿ ನಡೆದ ಗ್ಯಾಂಗ್ ವಾರ್ ನಿಂದ. ಉಡುಪಿಯ ಕುಂಜುಬೆಟ್ಟು ಅಂದರೆ ಉಡುಪಿ-ಮಣಿಪಾಲ ರಸ್ತೆಯಲ್ಲಿ 2024 ಮೇ 18ರಂದು ರಾತ್ರಿ ವೇಳೆ ಕಾರಿಗೆ ಕಾರು ಡಿಕ್ಕಿ ಹೊಡೆಸಿ ತಳವಾರ್ ಝಳಪಿಸಿ ಗರುಡ ಗ್ಯಾಂಗ್ ರಾಜ್ಯಕ್ಕೆ ಪರಿಚಯವಾಗಿತ್ತು. ಉಡುಪಿಯಲ್ಲಿ ಪರಸ್ಪರ ತಲವಾರ್‌ನಿಂದ ಹಲ್ಲೆ ಮಾಡಿಕೊಳ್ಳುವ ಕೆಲವು ದಿನದ ಹಿಂದೆ ಗ್ಯಾಂಗ್ ನ ಆಶಿಕ್ ಮತ್ತು ಅಲ್ಪಾಜ್ ನಡುವೆ ಕಾಪುವಿನಲ್ಲಿ ಜಗಳ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಮೇ 18ರಂದು ರಾತ್ರಿ ಮಾತನಾಡುವುದಿದೆ ಉಡುಪಿಗೆ ಬಾ ಎಂದು ಮಜೀದ್ ತಂಡದವರು ಆಶಿಕ್‌ನನ್ನು ಕರೆದಿದ್ದು, ಆತ ಕಾರಿನಲ್ಲಿ ಬಂದಿದ್ದ. ಬಳಿಕ ತನ್ನ ಮೇಲೆ ಹಲ್ಲೆ ನಡೆಸುತ್ತಾರೆಂದು ತಿಳಿದು ಕಾರಿನಿಂದ ಇಳಿದಿರಲಿಲ್ಲ. ಇದರಿಂದ ಆಕ್ರೋಶಗೊಂಡ ಇನ್ನೊಂದು ತಂಡ, ಆತ ಕುಳಿತಿದ್ದ ಕಾರಿಗೆ ಮತ್ತೊಂದು ಕಾರಿನಿಂದ ಡಿಕ್ಕಿ ಹೊಡೆಯುತ್ತಿದ್ದರು. ಬಳಿಕ ಸಿನಿಮೀಯ ರೀತಿಯಲ್ಲಿ ತಲವಾರ್‌ನಿಂದ ಕಾದಾಡುತ್ತ, ಶರೀಫ್ ಎಂಬಾತನ ಮೇಲೆ ಕಾರು ಹಾಯಿಸಿ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗುತ್ತಾರೆ. ತೀವ್ರ ಗಾಯಗೊಂಡಿದ್ದ ಆತನನ್ನು ಕಾರಿನೊಳಗೆ ಹಾಕಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣದ ಪ್ರಮುಖ ಆರೋಪಿಗಳನ್ನ ಬಂಧಿಸಿದ್ದರು.
ಇಸಾಕ್‌ನ ಪ್ರೇಯಸಿಯ ತಾಯಿ ಬಂಧನ
ಗರುಡ ಗ್ಯಾಂಗ್‌ನ ಇಸಾಕ್ ಸಾರ್ವಜನಿಕ ವಾಹನಗಳಿಗೆ ಗುದ್ದಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ, ಇಸಾಕ್‌ನ ಪ್ರೇಯಸಿ ಸುಝೈನಾಳ ತಾಯಿಯನ್ನು ಗುರುವಾರ ಮಣಿಪಾಲ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾಸರಗೋಡು ಮೂಲದ ಫಾತಿಮಾ(48) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಉಡುಪಿಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಎಸಿಜೆಎಮ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆಯ ಬಳಿಕ ಫಾತಿಮ, ತನ್ನ ಮಗಳಾದ ಸುಝೈನಾಳೂ ಪರಾರಿಯಾಗುವಂತೆ ಪ್ರಯತ್ನಿಸಿದ್ದಾಳೆ. ಅಲ್ಲದೇ ಆಕೆಯ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳಿಗೆ ಸಹಕರಿಸಿದ್ದಾಳೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.