ಉಡುಪಿ: ಕುಕ್ಕಿಕಟ್ಟೆ ಮುಖ್ಯ ರಸ್ತೆಯಿಂದ ಮುಚ್ಲುಕೊಡು ದೇವಸ್ಥಾನ ಸಂಪರ್ಕಿಸುವ ರಸ್ತೆಯ ಸಮೀಪ, ಡ್ರೈನೇಜ್ ನೀರನ್ನು ಮಳೆ ನೀರು ಹರಿಯುವ ಕಾಲುವೆಗೆ ಬಿಡಲಾಗುತ್ತಿದ್ದ ಪರಿಣಾಮ ಪರಿಸರದಲ್ಲಿ ದುರ್ಗಂಧ ಮತ್ತು ರೋಗಭೀತಿ ಉಂಟಾಗಿತ್ತು.

ಈ ಬಗ್ಗೆ ಜಿಲ್ಲಾಡಳಿತ ಮತ್ತು ನಗರಾಡಳಿತ ತಕ್ಷಣ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಹಾಗೂ ಸ್ಥಳೀಯರು ಆಗ್ರಹಿಸಿದ್ದರು. ಸಮಸ್ಯೆಯನ್ನು ಮಾಧ್ಯಮಗಳೂ ಪ್ರಮುಖವಾಗಿ ಬೆಳಕಿಗೆ ತಂದಿದ್ದವು.

ಪರಿಶೀಲನೆ ನಡೆಸಿದ ನಗರಾಡಳಿತ ಅಧಿಕಾರಿಗಳು, ಸ್ಥಳದಲ್ಲಿರುವ ಖಾಸಗಿ ಬಹುಮಹಡಿ ವಸತಿಸಮೂಹ ಮತ್ತು ವಾಣಿಜ್ಯ ಸಂಕೀರ್ಣದಿಂದ ಹೊರಹೊಮ್ಮುತ್ತಿದ್ದ ತ್ಯಾಜ್ಯ ನೀರನ್ನು ಸಾರ್ವಜನಿಕ ಮಳೆ ನೀರು ಕಾಲುವೆಗೆ ಹರಿಸಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದರು. ಬಳಿಕ ತಕ್ಷಣವೇ ಡ್ರೈನೇಜ್ ನೀರು ಹರಿಯುತ್ತಿದ್ದ ನಳಿಕೆಗೆ ಮುಚ್ಚಳ ಅಳವಡಿಸಿ ಸಮಸ್ಯೆಯನ್ನು ನಿವಾರಿಸಿದರು. ಕ್ರಮದಿಂದ ಈ ಪರಿಸರ ದ ಮಾಲಿನ್ಯ ತಡೆಗಟ್ಟಲ್ಪಟ್ಟಿದ್ದು, ಸ್ಥಳೀಯರು ನಗರಾಡಳಿತದ ತ್ವರಿತ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



