ಉಡುಪಿ : ಕಳೆದೊಂದು ತಿಂಗಳಿನಿಂದ ಕುಂದಾಪುರ ತಾಲೂಕಿನ ವಿವಿಧೆಡೆಗಳಲ್ಲಿ ಮಂಗಗಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಆತಂಕಕಾರಿ ಮಂಗನ ಕಾಯಿಲೆ ಸೋಂಕು ಕಾರಣವಲ್ಲ ಎಂಬುದು ದೃಢಪಟ್ಟಿದೆ. ಸಂಗ್ರಹಿಸಿದ ಮಂಗಗಳ ಸ್ಯಾಂಪಲ್‌ಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎಲ್ಲ ವರದಿಗಳು ನೆಗೆಟಿವ್ ಆಗಿವೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಈ ವರದಿಯಿಂದ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ಮಂಗನ ಕಾಯಿಲೆ ಭೀತಿಯಿಂದ ಕಳವಳಗೊಂಡಿದ್ದ ಜನರಲ್ಲಿ ಆತಂಕ ನಿವಾರಣೆಯಾಗಿದೆ. ಡಿ.14ರಂದು ಹೊಸಂಗಡಿಯಲ್ಲಿ ಮೊದಲ ಬಾರಿಗೆ ನಾಲ್ಕೈದು ಮಂಗಗಳು ಸಾವನ್ನಪ್ಪಿರುವುದು ಪತ್ತೆಯಾಗಿತ್ತು. ಇದೇ ಅವಧಿಯಲ್ಲಿ ಗಡಿ ಜಿಲ್ಲೆಯಾದ ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದ್ದರಿಂದ ಉಡುಪಿ ಜಿಲ್ಲೆಯಲ್ಲೂ ಭೀತಿ ಆವರಿಸಿತ್ತು. ಹೊಸಂಗಡಿಯ ಕಾರೂರು ಪ್ರದೇಶದಲ್ಲಿ ಸಾವನ್ನಪ್ಪಿದ್ದ ಐದು ಮಂಗಗಳ ಪೈಕಿ ಒಂದು ಮಂಗನ ಸ್ಯಾಂಪಲ್ ಮಾತ್ರ ಸಂಗ್ರಹಿಸಲಾಗಿದ್ದು, ಜೊತೆಗೆ ಅಲ್ಲಿಂದ ಉಣುಗು (ಉಣ್ಣೆ) ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಡಾಮಕ್ಕಿಯ ಮಾರ್ಮಣ್ಣು ಪ್ರದೇಶದಲ್ಲೂ ಮಂಗ ಸಾವು ವರದಿಯಾಗಿದ್ದು, ಅಲ್ಲಿಂದಲೂ ಒಂದು ಸ್ಯಾಂಪಲ್ ಪರಿಶೀಲನೆಗೆ ಕಳುಹಿಸಲಾಗಿತ್ತು. ಈ ಎಲ್ಲಾ ಮಾದರಿಗಳಲ್ಲೂ ಕೆಎಫ್‌ಡಿ ಸೋಂಕು ಪತ್ತೆಯಾಗಿಲ್ಲ.

ಕೆಎಫ್‌ಡಿ ಸೋಂಕು ಇಲ್ಲವೆಂಬುದು ಖಚಿತವಾದ ಬಳಿಕ ಮಂಗಗಳ ಸಾಮೂಹಿಕ ಸಾವಿಗೆ ಕಾರಣವೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಕೃಷಿ ಬೆಳೆ, ತೆಂಗು, ತರಕಾರಿ ಹಾಗೂ ಹಣ್ಣುಗಳಿಗೆ ಮಂಗಗಳ ಉಪಟಳದಿಂದ ಬೇಸತ್ತು ಯಾರಾದರೂ ವಿಷ ಹಾಕಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.

ಮಂಗನ ಕಾಯಿಲೆ ಆತಂಕದ ಹಿನ್ನೆಲೆಯಲ್ಲಿ ಕುಂದಾಪುರ ಭಾಗದ ಕಾಡಂಚಿನ ಗ್ರಾಮಗಳಲ್ಲಿ ಸಾವನ್ನಪ್ಪಿದ ಮಂಗಗಳ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎಲ್ಲ ವರದಿಗಳು ನೆಗೆಟಿವ್ ಆಗಿವೆ. ಆದರೂ ಈಗ ಮಂಗನ ಕಾಯಿಲೆ ಹರಡುವ ಕಾಲವಾಗಿರುವುದರಿಂದ ಜಾಗೃತಿ ಕ್ರಮ ಮುಂದುವರಿಸಲಾಗಿದೆ. ಎಲ್ಲ ಆಸ್ಪತ್ರೆಗಳಿಗೆ ಡಿಎಂಪಿ ತೈಲ ಪೂರೈಸಲಾಗಿದೆ
ಡಾ. ಬಸವರಾಜು ಹುಬ್ಬಳ್ಳಿ (ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ)



