ಉಡುಪಿ : ನವೆಂಬರ್ 25ರಂದು ಆರಂಭಗೊಂಡ ಕಿಶೋರ ಯಕ್ಷಗಾನ ಸಂಭ್ರಮ – 2025 ಚಿತ್ತೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭವ್ಯವಾಗಿ ಸಮಾಪನಗೊಂಡಿತು. ಸಮಾರೋಪ ಸಮಾರಂಭಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಧ್ಯಕ್ಷತೆ ವಹಿಸಿದ್ದರು.

ಸಮಾರೋಪ ಭಾಷಣ ಮಾಡಿದ ಹಿರಿಯ ಯಕ್ಷಗಾನ ವಿಮರ್ಶಕ ರಾಘವ ಶೆಟ್ಟಿ ಬೇಳೂರು, ಕಲಾರಂಗದ ಕಾರ್ಯಕರ್ತರ ಸೇವೆ ಅಭಿನಂದನಾರ್ಹವೆಂದರು. ಕಾರ್ಯಕ್ರಮದಲ್ಲಿ ಡಾ. ರತನ್ ಕುಮಾರ ಶೆಟ್ಟಿ, ಡಾ. ರಾಜೇಶ ಬಾಯರಿ, ಶ್ರೀಮತಿ ಸುಗುಣಾ, ಶ್ರೀಮತಿ ಆಶಾ ಆಚಾರ್ಯ, ಕರುಣಾಕರ ಶೆಟ್ಟಿ ಹಾಗೂ ನಾರಾಯಣ ಹೆಗಡೆ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಶ್ರಾವ್ಯ, ಯಶಸ್ವಿನಿ, ಶ್ರೇಯಸ್ ಮತ್ತು ಋತು ತಮ್ಮ ಯಕ್ಷಗಾನ ಕಲಿಕೆಯ ಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಮಲ್ಯಾಡಿ ಲೈವ್ನ ಪ್ರಶಾಂತ್ ಹಾಗೂ ಪ್ರಸಾಧನ ತಂಡದ ಮುಖ್ಯಸ್ಥ ಗಣೇಶ್ ಸಾಲಿಗ್ರಾಮ ಅವರನ್ನು ಗೌರವಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನಾ ಭಾಷಣ ಮಾಡಿದರು. ಸದಾನಂದ ಶೆಟ್ಟಿ ಸ್ವಾಗತಿಸಿ, ನಾಗರಾಜ ಶೆಟ್ಟಿ ನೈಕಂಬಿ ವಂದಿಸಿದರು. ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನಿರಂತರ 37 ದಿನಗಳ ಕಾಲ ನಾಲ್ಕು ವಿಧಾನಸಭಾ ಕ್ಷೇತ್ರಗಳ 94 ಶಾಲೆಗಳ ಯಕ್ಷಗಾನ ಪ್ರದರ್ಶನಗಳು 12 ಕೇಂದ್ರಗಳಲ್ಲಿ ನಡೆದಿದ್ದು, 41 ಗುರುಗಳು ಮತ್ತು ಐದು ಪ್ರಸಾಧನ ತಂಡಗಳು ಯಶಸ್ಸಿಗೆ ಮಹತ್ವದ ಪಾತ್ರ ವಹಿಸಿದ್ದವು. ಈ ಅಭಿಯಾನದಲ್ಲಿ 1,063 ಹುಡುಗರು, 1,972 ಹುಡುಗಿಯರು ಸೇರಿದಂತೆ ಒಟ್ಟು 3,035 ವಿದ್ಯಾರ್ಥಿಗಳು ಭಾಗವಹಿಸಿದ್ದು, 9 ಕ್ರೈಸ್ತ, 21 ಮುಸ್ಲಿಂ, 522 ಬೇರೆ ಜಿಲ್ಲೆಗಳ ಹಾಗೂ 21 ಬೇರೆ ರಾಜ್ಯಗಳ ವಿದ್ಯಾರ್ಥಿಗಳ ಭಾಗವಹಿಸಿದ್ದು, ಯಕ್ಷಗಾನ ಸಂಭ್ರಮದ ಸಮಾವೇಶ ಸ್ವರೂಪವನ್ನು ಪ್ರತಿಬಿಂಬಿಸಿದೆ.



