ಉಡುಪಿ : ಕಾರ್ಕಳ ತಾಲೂಕು ಸಮಾನ ಮನಸ್ಕ ಮಹಿಳಾ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾರ್ಚ್ 28ರಂದು ಕಾರ್ಕಳದ ಜಾಮಿಯಾ ಹಾಲ್ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಜಮಾಅತೆ ಇಸ್ಲಾಮೀ ಹಿಂದ್, ಸುಗಮ್ಯ, ಲಯನ್ಸ್, ಇಂಚರ, ಕೊರಗ, ಸಂಪದ ಹಾಗೂ ಜೈನ ಮಹಿಳಾ ಸಂಘಟನೆಗಳ ಒಕ್ಕೂಟದ ಸಂಗಾತಿಗಳು ಈ ಕಾರ್ಯಕ್ರಮವನ್ನು ಸಂಯುಕ್ತವಾಗಿ ನಡೆಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಕಾರ್ಕಳದ ಕಾರ್ಯಕರ್ತೆ ಝಬೀನ್ ಅವರು ಸ್ವಾಗತಿಸಿದರು. ಸುಗಮ್ಯ ಜಿಲ್ಲಾ ಒಕ್ಕೂಟದ ಕೋಶಾಧಿಕಾರಿ ಹಿಲ್ಡಾ ಫೆರ್ನಾಂಡಿಸ್ ಸಂವಿಧಾನದ ಪೀಠಿಕೆಯನ್ನು ಓದಿ ಕಾರ್ಯಕ್ರಮ ಉದ್ಘಾಟಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಹುಮೈರಾ ಅವರು ನೆರೆಕರೆಯ ಹಕ್ಕುಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿವಿಧ ಸಮುದಾಯಗಳ ಆರು ಮಹಿಳೆಯರನ್ನು ಸನ್ಮಾನಿಸಲಾಯಿತು. ಕ್ರೈಸ್ತ ಸಮುದಾಯದ ಲಿಡಿಯಾ ಫೆರ್ನಾಂಡಿಸ್, ಮುಸ್ಲಿಂ ಸಮುದಾಯದ ಶಂಷಾದ್, ಬಿಲ್ಲವ ಸಮುದಾಯದ ಲೀಲಾ ಎನ್. ಪೂಜಾರಿ, ಕೊರಗ ಸಮುದಾಯದ ಅನಿತಾ, ಜೈನ ಸಮುದಾಯದ ಶರ್ಮಿಳಾ ಜೈನ್ ಹಾಗೂ ಲಯನ್ಸ್ ಸಂಸ್ಥೆಯ ವಸಂತಿ ಪ್ರಥ್ವಿರಾಜ್ ಅವರನ್ನು ಗೌರವಿಸಲಾಯಿತು.

ಸನ್ಮಾನಿತರ ಪರಿಚಯವನ್ನು ಡಾ. ಅಫ್ಸಾರುಲ್ ಹುದಾ, ಮೀನಾ ಸಿಂಥಿಯ, ವೀಣಾ ಹರೀಶ್, ತುಳಸಿ ಪೂರ್ಣೇಶ್, ಶ್ರೇಯಾ ಹಾಗೂ ಸುನೀತಾ ಶೆಟ್ಟಿ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿ.ಎಂ.ಜೆ.ಎಫ್ ಲಯನ್ ಸಪ್ನಾ ಸುರೇಶ್ ಮಹಿಳಾ ಹಕ್ಕುಗಳ ಕುರಿತು ಮಾತನಾಡಿದರು. ಸಂಪದ ಉಡುಪಿಯ ನಿರ್ದೇಶಕ ಫಾದರ್ ರೆಜಿನಾಲ್ಡ್ ಪಿಂಟೊ ಹಾಗೂ ಸಂಯೋಜಕ ಸ್ಟಾನ್ಲೀ ಫೆರ್ನಾಂಡಿಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಒಟ್ಟು ಸುಮಾರು 150ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಶೈಲಜಾ ವಿಶ್ವನಾಥ್ ಪಾಟ್ಕರ್ ಧನ್ಯವಾದ ಅರ್ಪಿಸಿದರು. ಸಂಪದ ಉಡುಪಿಯ ಕಾರ್ಯಕರ್ತೆ ಐರಿನ್ ನೊರೋಹ್ನ ಕಾರ್ಯಕ್ರಮ ನಿರೂಪಿಸಿದರು.



