ಉಡುಪಿ : ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ದಾಖಲೆಗಳನ್ನು ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕಾರ್ಕಳ ಪುರಸಭೆ ಕಚೇರಿಯೊಳಗೆ ಪ್ರತಿಭಟನೆ ನಡೆಸಿದ ಘಟನೆ ಸಾರ್ವಜನಿಕರ ಗಮನಸೆಳೆದಿದೆ.

ಮಾಜಿ ಪುರಸಭಾ ಸದಸ್ಯ ಸುನೀಲ್ ಕೋಟ್ಯಾನ್ ಅವರು ಮಾಹಿತಿ ಹಕ್ಕು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಚೇರಿಯಲ್ಲೇ ಅಧಿಕಾರಿಯ ಟೇಬಲ್ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಕೇಳಿದ ಮಾಹಿತಿಯನ್ನು ಪೂರ್ಣವಾಗಿ ನೀಡದೇ, ಮೇಲ್ಮನವಿ ಸಲ್ಲಿಸಿ ಎಂದು ಉಡಾಫೆ ಉತ್ತರ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಕಾರ್ಕಳ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ ಅಂಬಾಭವಾನಿ ದೇವಸ್ಥಾನ ರಸ್ತೆಗೆ 2011-12ನೇ ಸಾಲಿನಲ್ಲಿ ಡಾಮರೀಕರಣ ನಡೆಸಲಾಗಿತ್ತು. ಬಳಿಕ ಅದೇ ರಸ್ತೆಗೆ ಮರು ಡಾಮರೀಕರಣ ಕೂಡ ನಡೆದಿದ್ದರೂ, ಆ ರಸ್ತೆಯನ್ನು ಹಾಗೂ ದೇವಸ್ಥಾನಕ್ಕೆ ಹೋಗುವ ಮಾರ್ಗವನ್ನು ಉದ್ಯಮಿಯೊಬ್ಬರು ಲೇಔಟ್ ನಿರ್ಮಿಸಿ ಮುಚ್ಚಿರುವ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ.

ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ, ಪುರಸಭೆ ಅಧಿಕಾರಿಗಳು ರಸ್ತೆ ಕಾಮಗಾರಿ ನಡೆದಿಲ್ಲವೆಂದು ಹೇಳಿ ಮಾಹಿತಿ ನೀಡಲು ಮುಂದಾಗುತ್ತಿಲ್ಲ ಎಂದು ಸುನೀಲ್ ಕೋಟ್ಯಾನ್ ಆರೋಪಿಸಿದ್ದಾರೆ. ಅಲ್ಲದೆ, ಅಧಿಕಾರಿಗಳು ಉದ್ಯಮಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದರು. ನನಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ ಎಂದು ಸುನೀಲ್ ಕೋಟ್ಯಾನ್ ಎಚ್ಚರಿಸಿದ್ದಾರೆ. ಘಟನೆಯಿಂದ ಕೆಲಕಾಲ ಪುರಸಭೆ ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.



