ಉಡುಪಿ : ಕಾರೊಂದು ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕಾಪು ವಿದ್ಯಾನಿಕೇತನ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಕಾರು ಚಾಲಕ ಕೊಪ್ಪಲಂಗಡಿಯ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾಪುವಿನಿಂದ ಉಚ್ಚಿಲ ಕಡೆಗೆ ಸಾಗುತ್ತಿದ್ದ ಕಾರು ಆಚಾನಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಕಾರಿನ ಮುಂದಿನ ಭಾಗ ಸಂಪೂರ್ಣ ಹಾನಿಗೊಳಗಾಗಿದ್ದು, ಇಸ್ಮಾಯಿಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ಮಾಹಿತಿ ನೀಡಿದ್ದು, ಎಸ್ಡಿಪಿಐ ಅಂಬುಲೆನ್ಸ್ ತಂಡದ ಜಲಾಲುದ್ದೀನ್ ಉಚ್ಚಿಲ ಮತ್ತು ಹಮೀದ್ ಉಡುಪಿ ಗಾಯಗೊಂಡವರನ್ನು ತುರ್ತುವಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.



